ಮೈಸೂರು: ನಿನ್ನೆಯ ಘಟನೆಗೆ ನನ್ನನ್ನು ಕ್ಷಮಿಸು ತಾಯಿ ಎಂದು ಶಾಸಕ ಸಾ.ರಾ.ಮಹೇಶ್ ಬೆಳ್ಳಂಬೆಳಿಗ್ಗೆ ಚಾಮುಂಡಿ ತಾಯಿ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅನರ್ಹ ಶಾಸಕ ಹೆಚ್. ವಿಶ್ವನಾಥ್ ವಿರುದ್ಧ ಮಾಡಿದ ಆರೋಪ ಸತ್ಯ ಎಂದು ಶಾಸಕ ಸಾ.ರಾ.ಮಹೇಶ್ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ್ದು ಈ ವೇಳೆ ರಾಜ್ಯದ ಜನರ ಕ್ಷಮೆ ಯಾಚಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಚಾಮುಂಡಿ ಬೆಟ್ಟದಲ್ಲಿ ಜನಪ್ರತಿನಿಧಿಗಳ ಆಣೆ ಪ್ರಮಾಣದ ಪ್ರಹಸನ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಈ ರೀತಿಯ ಘಟನೆಗಳು ಮರುಕಳಿಸಬಾರದೆಂಬ ಕಿವಿಮಾತು ಎಲ್ಲೆಡೆ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ಸಾ.ರಾ.ಮಹೇಶ್ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಡ ದೇವತೆಗೆ ಕ್ಷಮಿಸು ತಾಯಿ ಎಂದು ಪೂಜೆ ಸಲ್ಲಿಸಿದ್ದು, ವಿಶ್ವನಾಥ್ ವಿಚಾರವನ್ನು ಇನ್ನು ಮುಂದೆ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳಲ್ಲಿ ಮಾತನಾಡುವುದಿಲ್ಲ ಎಂದು ಸಾ.ರಾ.ಮಹೇಶ್ ಸ್ಪಷ್ಟಪಡಿಸಿದರು.