ಮೈಸೂರು: ನಾನು ಸರ್ಕಾರ ತಂದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನ ಟೀಕೆ ಮಾಡುತ್ತಾರಲ್ಲ, ಅವರೆಲ್ಲಾ ಯಡಿಯೂರಪ್ಪನವರ ಧೂಳಿಗೂ ಸಮವಿಲ್ಲ ಎಂದು ಸಿ.ಪಿ. ಯೋಗೇಶ್ವರ್ ಹಾಗೂ ಎಚ್.ವಿಶ್ವನಾಥ್ ವಿರುದ್ಧ ಸಚಿವ ಎಸ್.ಟಿ. ಸೋಮಶೇಖರ್ ಕೆಂಡಾಮಂಡಲರಾಗಿದ್ದಾರೆ.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ದೊಡ್ಡಮಟ್ಟದ ಹೋರಾಟಗಾರ. ಅವರ ಹೋರಾಟದಿಂದಲೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಾವು 17 ಜನ ಹೋಗಿದ್ದಕ್ಕೆ ಮುಖ್ಯಮಂತ್ರಿಯಾಗಿದ್ದಾರೆ ಎನ್ನುವುದಕ್ಕಿಂತ, ಬಿಎಸ್ವೈ ನೇತೃತ್ವದಲ್ಲಿ 104 ಜನ ಗೆದ್ದಿದ್ದರು, ಯಡಿಯೂರಪ್ಪ ಅವರ ಬಗ್ಗೆ ಟೀಕಿಸುವವರು ಯಾಕೆ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ, ಅವರ ಮಟ್ಟದಲ್ಲಿ ಬೆಳೆದಿರುವ ವ್ಯಕ್ತಿ ಮಾತನಾಡಿದರೆ ಅದಕ್ಕೆ ತೂಕ ಇರುತ್ತೆ. ಆದರೆ ಹಾದಿಬೀದಿಯಲ್ಲಿ ಅವರ ಬಗ್ಗೆ ಮಾತನಾಡಬಾರದು, ಸಮಸ್ಯೆ ಇದ್ದರೆ ಅವರ ಬಳಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಆದರೆ, ಪದೇ ಪದೆ ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಡೆತ್ ಆಡಿಟ್ ಮಾಡಿಸಿ ಕ್ರಮ:
ಮೈಸೂರಿನ ಕೊರೊನಾ ಸಾವಿನ ಸಂಖ್ಯೆ ಬಗ್ಗೆ ಡೆತ್ ಆಡಿಟ್ ಮಾಡಿಸಿ, ಯಾವ ಅಧಿಕಾರಿಗಳ ಅವಧಿಯಲ್ಲಿ ಲೋಪವಾಗಿದೆಯೋ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ರವಾನಿಸಿದರು.