ಮೈಸೂರು: ಕೋವಿಡ್ 3ನೇ ಅಲೆ ತಡೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಔಷಧಿ ದಾಸ್ತಾನು, ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸುವಿಕೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ ಸೋಮಶೇಖರ್ ಹೇಳಿದರು.
ಕೋವಿಡ್-19 ಪರಿಸ್ಥಿತಿ ನಿಯಂತ್ರಣ ಸಂಬಂಧ ಜಿಲ್ಲಾ ಪಂಚಾಯತ್ ಕಚೇರಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಶೀಲನೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಫೆಬ್ರವರಿಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂದು ತಜ್ಞರ ತಂಡ ಮುನ್ನೆಚ್ಚರಿಕೆ ನೀಡಿರುವ ಹಿನ್ನಲೆ ಅವಶ್ಯಕತೆಗೆ ಅನುಗುಣವಾಗಿ ಔಷಧಿ ದಾಸ್ತಾನು ಇರುವ ಬಗ್ಗೆ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು. ಈ ವೇಳೆ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲಿ ಸಜ್ಜಾಗಿದೆ ಎಂದರು.
ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಕಳೆದ ಬಾರಿಯಂತೆ ಈ ಬಾರಿ ಯಾವುದೇ ರೀತಿಯ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಸರ್ಕಾರ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಿದೆ. ಸರ್ಕಾರದ ಹಂತದಲ್ಲಿ ಏನಾಗಬೇಕು ಎಂಬುದನ್ನು ಗಮನಕ್ಕೆ ತನ್ನಿ. ಶಾಸಕರು, ಸ್ಥಳೀಯ ಜನಪ್ರತಿನಿಧಿಗಳನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಆರಂಭಿಕ ಹಂತದಲ್ಲೇ ಸಮಸ್ಯೆ ಬಗೆಹರಿಸಬಹುದು ಎಂದು ಸಲಹೆ ನೀಡಿದರು.
ಬೆಂಗಳೂರು, ಬೆಳಗಾವಿ ಹೊರತುಪಡಿಸಿದರೆ ಮೈಸೂರು ಜಿಲ್ಲೆಯಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆ. ಶಾಲೆಗಳಿಗೆ ರಜೆ ನೀಡಬೇಕೆಂದು ಅನೇಕರು ಕರೆ ಮಾಡಿ ಹೇಳುತ್ತಿದ್ದಾರೆ. ಶಾಲೆಗೆ ರಜೆ ನೀಡುವ ವಿಚಾರವಾಗಿ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಶಿಕ್ಷಣ ಸಚಿವರು ಸಹ ಪ್ರತಿ ಜಿಲ್ಲೆಯ ಮಾಹಿತಿ ತರಿಸಿಕೊಂಡು ತಜ್ಞರ ಸಲಹೆಗಳನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಜಿಲ್ಲೆಗೆ 17 ಆಕ್ಸಿಜನ್ ಘಟಕ ಮಂಜೂರಾಗಿದೆ. ಇದರಲ್ಲಿ 12 ಘಟಕಗಳು ಪೂರ್ಣಗೊಂಡಿದ್ದು, ಐದು ನಿರ್ಮಾಣ ಹಂತದಲ್ಲಿವೆ. ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಲಾಗಿದೆ. ತಾಂತ್ರಿಕ ಸಮಿತಿ ನಿರ್ಧರಿಸಿರುವ ಎಲ್ಲಾ ಔಷಧಿಗಳನ್ನು ತಾಲೂಕು ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ. ಔಷಧಿ ಮತ್ತು ಪರಿಕರಗಳಿಗೆ ಯಾವುದೇ ಕೊರತೆ ಇಲ್ಲ. 4 ಸಾವಿರ ಹೋಮ್ ಐಸೋಲೇಷನ್ ಕಿಟ್ ಗಳನ್ನು ಪಡೆಯಲಾಗಿದೆ. ವೈದ್ಯರ ಹಾಗು ಸಿಬ್ಬಂದಿ ಸುರಕ್ಷತೆಗೆ ಬೇಕಿರುವ ಎಲ್ಲಾ ಪರಿಕರಗಳನ್ನು ದಾಸ್ತಾನು ಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.
ಇನ್ನೆರಡು ದಿನದಲ್ಲಿ ಮನೆಗಳಿಗೆ ಹೋಮ್ ಐಸೋಲೇಷನ್ ಕಿಟ್ ತಲುಪಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳಿದಾಗ, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆ ಐಸೋಲೇಷನ್ ಕಿಟ್ ಸಿಗುವಂತೆ ನೋಡಿಕೊಳ್ಳಬೇಕೆಂಬ ಸಲಹೆ ಶಾಸಕರುಗಳಿಂದ ವ್ಯಕ್ತವಾಯಿತು.
ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಕಾಯ್ದಿರಿಸಿರುವ ಬಗ್ಗೆ ಪರಿಶೀಲನೆ ನಡೆಸಬೇಕು. ಕೋವಿಡ್ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಓದಿ: ವೇತನ ಹೆಚ್ಚಳ ಎಫೆಕ್ಟ್: ಅತಿಥಿ ಉಪನ್ಯಾಸಕರ ಹುದ್ದೆಗೆ ಹರಿದು ಬರುತ್ತಿರುವ ಅರ್ಜಿಗಳ ಮಹಾಪೂರ