ಮೈಸೂರು: ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರಿಗೆ ಗೊತ್ತಾಗದ ರೀತಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಪರೋಕ್ಷವಾಗಿ ಎಚ್.ವಿಶ್ವನಾಥ್ ವಿರುದ್ಧ ಆರೋಪ ಮಾಡಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರಿಗೆ ಗೊತ್ತಿಲ್ಲದೇ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದ್ದು, ಇದನ್ನು ಹುಣಸೂರಿನ ಉಪ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಎಚ್.ವಿಶ್ವನಾಥ್ ನಡೆಸುತ್ತಿದ್ದಾರೆ. ಇದಕ್ಕೆ ಮೈಸೂರು ಜಿಲ್ಲೆಗೆ 9 ತಿಂಗಳ ಹಿಂದೆ ಬಂದ ಅಬಕಾರಿ ಅಧಿಕಾರಿಯನ್ನು ಪುನಃ ವರ್ಗಾವಣೆ ಮಾಡಿದ್ದು, ಹೊಸದಾಗಿ ಬಂದ ಅಧಿಕಾರಿಯಿಂದ 2 ಕೋಟಿ ರೂಪಾಯಿ ತೆಗೆದುಕೊಂಡು ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದರು.
ಜೊತೆಗೆ ಹುಣಸೂರಿನ ಒಬ್ಬ ಅಧಿಕಾರಿಯನ್ನು 50 ಲಕ್ಷ ರೂಪಾಯಿ ಪಡೆದು ವರ್ಗಾವಣೆ ಮಾಡಿಸಿದ್ದಾರೆ ಎಂದು ಆರೋಪಿಸಿದ ಸಾ.ರಾ.ಮಹೇಶ್, ಮೈಸೂರು ಜಿಲ್ಲೆಗೆ ಇಬ್ಬರು ಉಸ್ತುವಾರಿ ಸಚಿವರಿದ್ದಾರೆ. ಒಬ್ಬರು ಸೋಮಶೇಖರ್ ಆದರೆ, ಮತ್ತೊಬ್ಬರು ಎಚ್.ವಿಶ್ವನಾಥ್ ಎಂದು ಆರೋಪಿಸಿದರು.
ಇನ್ನು ಜಿಲ್ಲೆಯಲ್ಲಿ ಕೊರೊನಾ ಸಂದರ್ಭದಲ್ಲಿ ಅಧಿಕಾರಿಯೊಬ್ಬರು ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣದ ತಾಲೂಕುಗಳಲ್ಲಿರುವ ರೈಸ್ ಮಿಲ್ ಗಳಿಂದ ಅಕ್ಕಿಯನ್ನು ಉಚಿತವಾಗಿ ಸಂಗ್ರಹಿಸಿದ್ದಾರೆ. ಈ ಅಕ್ಕಿ ಎಲ್ಲಿ ಹೋಯಿತು ಎಂಬ ಬಗ್ಗೆ ಮಾಹಿತಿ ಇಲ್ಲ , ಇದರ ಬಗ್ಗೆ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದರು.