ಮೈಸೂರು: ಸಿದ್ದರಾಮಯ್ಯನವರ ವಿರುದ್ದ ನಮ್ಮ ಯಾವ ದೊಡ್ಡನಾಯಕರೂ ಬೇಡ. ಕುಮಾರಸ್ವಾಮಿಯೂ ಬೇಡ. ನಮ್ಮ ಜಿ.ಟಿ.ದೇವೇಗೌಡ್ರು ಬೇಡ. ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದರು.
ಜೆಡಿಎಸ್ ಮೈಸೂರು ಭಾಗದಲ್ಲಿ ಒಂದು ಸ್ಥಾನ ಗೆಲ್ಲಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಈ ಭಾಗದಲ್ಲಿ ಜೆಡಿಎಸ್ ಒಂದು ಸ್ಥಾನ ಗೆಲ್ಲಲ್ಲ ಅಂತ ನಮ್ಮ ಮೈಸೂರು ನಾಯಕರು ಹೇಳಿದ್ದಾರೆ. ಮೊದಲು ನಿಮ್ಮ ಕ್ಷೇತ್ರ ಯಾವುದು ಹೇಳಿ?. ಐದು ವರ್ಷ ಪೂರೈಸಿ ಸಿಎಂ ಆಗಿದ್ದವರು ಒಂದು ವರ್ಷ ಇದ್ದರೂ ತಮ್ಮದು ಯಾವ ಕ್ಷೇತ್ರ ಅಂತ ಹೇಳ್ತಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.
ನಿಮ್ಮ ಕ್ಷೇತ್ರ ಯಾವುದು ಅಂತ ಹೇಳದೆ ಏನೇನೋ ಮಾತನಾಡುತ್ತೀರಾ?. ಇಷ್ಟು ವರ್ಷದ ಅನುಭವ ಇದೆ. ಜೆಡಿಎಸ್ ಬಗ್ಗೆ ಏನು ಮಾತನಾಡಬೇಕು ಅಂತ ಗೊತ್ತಿಲ್ವಾ?. ನೀವು ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಪಕ್ಷ, ಕಾರ್ಯಕರ್ತರ ಶ್ರಮ ಇದೆ ಎಂಬುದನ್ನು ಮರೆಯಬೇಡಿ ಎಂದು ವಾಗ್ದಾಳಿ ನಡೆಸಿದರು. ಅಪ್ಪ, ಮಗ ಇಬ್ಬರಿಗೂ ಟಿಕೆಟ್ ಕೊಡಿಸುವ ಕೆಲಸ ಮಾಡುತ್ತೇನೆ. ಅವರು ಪಕ್ಷದಲ್ಲೇ ಉಳಿಯುವುದಾದರೆ ನಾನೇ ವರಿಷ್ಠರ ಜೊತೆ ಮಾತನಾಡುತ್ತೇನೆ ಎಂದು ಬಹಿರಂಗ ಆಫರ್ ನೀಡಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ ಹಾಗೂ ಜಿ.ಡಿ.ಹರೀಶ್ಗೌಡ ಜೆಡಿಎಸ್ ತೊರೆಯುವ ವಿಚಾರವಾಗಿ ಮಾತನಾಡಿ, ಚಾಮುಂಡೇಶ್ವರಿಯಲ್ಲಿ ಅವರೇ ಶಾಸಕರಿದ್ದಾರೆ. ಹುಣಸೂರಿನಲ್ಲಿ ನಮ್ಮ ಪರಾಜಿತ ಅಭ್ಯರ್ಥಿ ಸೋಮಶೇಖರ್ ಸಂಘಟನೆ ಮಾಡ್ತಿದ್ದಾರೆ. ಜಿಟಿಡಿ ಪುತ್ರ ಸ್ಪರ್ಧಿಸುವುದಾದರೆ ಸೋಮಶೇಖರ್ ಮನವೊಲಿಸುತ್ತೇನೆ. ಹರೀಶ್ ಗೌಡರಿಗೆ ಹುಣಸೂರಿನಿಂದ ಟಿಕೆಟ್ ಕೊಡಿಸುತ್ತೇನೆ. ಪಕ್ಷದ ನಮ್ಮ ನಾಯಕರ ಮನವೊಲಿಸಿ ಟಿಕೆಟ್ ಕೊಡಿಸುತ್ತೇನೆ. ಜಿಟಿಡಿ ಕುಟುಂಬಕ್ಕೆ ಓಪನ್ ಆಫರ್ ಕೊಟ್ಟು ಕುತೂಹಲ ಮೂಡಿಸಿದ್ದಾರೆ ಎಂದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿ: ರಾಮಲಿಂಗರೆಡ್ಡಿ