ಮೈಸೂರು: ಪರ್ವ ಕಾದಂಬರಿಯ ನಾಟಕ ರೂಪ ಪ್ರದರ್ಶನಕ್ಕೆ ಇಂದು ಬೆಳಗ್ಗೆ ಸ್ವತಃ ಸಾಹಿತಿ ಎಸ್.ಎಲ್.ಭೈರಪ್ಪ ಚಾಲನೆ ನೀಡಿ ನಾಟಕವನ್ನು ವೀಕ್ಷಿಸಿದರು.
ಮೈಸೂರಿನ ರಂಗಾಯಣವು ಎಸ್.ಎಲ್.ಭೈರಪ್ಪನವರ ಪ್ರಸಿದ್ಧ ಪರ್ವ ಕಾದಂಬರಿಯನ್ನು ನಾಟಕ ರೂಪಕ್ಕೆ ರೂಪಾಂತರಿಸಿದ್ದು, ಮಾರ್ಚ್ 12, 13, 14ರಂದು ಕಲಾಮಂದಿರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6:30ರವರೆಗೆ ಈ ನಾಟಕ ಪ್ರದರ್ಶನ ನಡೆಯಲಿದೆ. 4 ವಿರಾಮಗಳು, 3 ಹತ್ತು ನಿಮಿಷಗಳ ಕಾಲದ ಚಹ ವಿರಾಮ ಹಾಗೂ 30 ನಿಮಿಷಗಳ ಕಾಲ ಊಟದ ವಿರಾಮ ಇರುತ್ತದೆ.
ಈ ನಾಟಕವನ್ನು ಹಿರಿಯ ರಂಗಭೂಮಿ ಕಲಾವಿದ ಪ್ರಕಾಶ್ ಬೆಳವಾಡಿ ನಿರ್ದೇಶನ ಮಾಡಿದ್ದು, ಈ ನಾಟಕದಲ್ಲಿ ರಂಗಾಯಣದ ಹಿರಿಯ 12 ಕಲಾವಿದರು ಸೇರಿದಂತೆ 25 ಮಂದಿ ಕಲಾವಿದರು ಹಾಗೂ 10 ಜನ ತಂತ್ರಜ್ಞರು ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ನಾಟಕ ರೂಪದಲ್ಲಿ ಮೂಡಿ ಬಂದ ಪರ್ವ ಕಾದಂಬರಿ: ಸಾಹಿತಿ ಎಸ್.ಎಲ್.ಭೈರಪ್ಪ ಮೆಚ್ಚುಗೆ
ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್.ಎಲ್.ಭೈರಪ್ಪ, ಪರ್ವ ಕಾದಂಬರಿ ನಾಟಕ ರೂಪದಲ್ಲಿ ಚೆನ್ನಾಗಿ ಮೂಡಿಬಂದಿದೆ. ಪ್ರಕಾಶ್ ಬೆಳವಾಡಿ ಒಳ್ಳೆಯ ನಿರ್ದೇಶನ ಮಾಡಿದ್ದಾರೆ. 3 ತಾಲೀಮುಗಳನ್ನು ನೋಡಿದ್ದೇನೆ, ನಿರೂಪಣೆ ಚೆನ್ನಾಗಿದೆ. ಪರ್ವ ಕಾದಂಬರಿಯಲ್ಲೇ ನಾಟಕ ರೂಪ ಇದೆ. 7 ಗಂಟೆ ಅಲ್ಲ, 10 ಗಂಟೆಯಾದರು ನಾಟಕ ನೋಡುವ ರಸ ಇದರಲ್ಲಿ ಇದೆ ಎಂದರು.