ಮೈಸೂರು : ಕುಡಿದ ಅಮಲಿನಲ್ಲಿ ಇಬ್ಬರು ರೌಡಿ ಶೀಟರ್ಗಳ ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಒಬ್ಬ ರೌಡಿ ಶೀಟರ್ ಕೊಲೆಯಾಗಿ, ಮತ್ತೊಬ್ಬ ರೌಡಿಶೀಟರ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಗರದ ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ರೌಡಿ ಶೀಟರ್ ಶ್ರೀ ಗಂಧ ಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿ ಶೀಟರ್ ಆಗಿದ್ದು, ಮತ್ತೊಬ್ಬ ರೌಡಿ ಶೀಟರ್ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ. ಈತ ಕೆ ಆರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಆಗಿದ್ದಾನೆ.
ಈ ಇಬ್ಬರು ರೌಡಿ ಶೀಟರ್ಗಳು ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಪರಸ್ಪರ ಚಾಕುವಿನಿಂದ ಇರಿದುಕೊಂಡಿದ್ದಾರೆ. ಈ ಗಲಾಟೆ ವೇಳೆ ಮೈಸೂರು ಕಾಕರವಾಡಿ ಬಡಾವಣೆಯ ನಿವಾಸಿ ಶ್ರೀಗಂಧ ಸಾವನ್ನಪ್ಪಿದ್ದಾನೆ.
ಮೂವರ ಬಂಧನ : ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ ಆರ್ ಪೊಲೀಸರು ಮೂವರನ್ನು ಬಂಧಿಸಿದ್ದು, ಅದರಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೌಡಿಶೀಟರ್ ರವಿ ತಂದೆ ರಮೇಶ್, ಸ್ನೇಹಿತರಾದ ಮುಜೀಬ್ ಹಾಗೂ ಹರೀಶ್ ಎಂಬುವರನ್ನು ಪೊಲೀಸರನ್ನು ಬಂದಿಸಿದ್ದು, ತನಿಖೆ ನಡೆಸಲಾಗಿದೆ. ಈ ಇಬ್ಬರು ಭಾನುವಾರ ರಾತ್ರಿ ಕೆ ಆರ್ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಕುಡಿದ ಅಮಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಒಬ್ಬ ರೌಡಿ ಶೀಟರ್ ಕೊಲೆಯಾಗಿದ್ದು, ಮತ್ತೊಬ್ಬ ರೌಡಿ ಶೀಟರ್ಗೆ ಗಾಯಗಳಾಗಿವೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದ್ದು, ಬಂಧಿತ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.
ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ: ಇನ್ನೊಂದೆಡೆ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ (ಮಾರ್ಚ್ 5ರಂದು) ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ನಡೆದಿತ್ತು. ಗ್ರಾಮದ ಮಹೇಶ್(27) ಕೊಲೆಯಾದ ವ್ಯಕ್ತಿ. ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಈ ದುರ್ಘಟನೆ ನಡೆದಿತ್ತು.
ಮಹೇಶ್ ಎಂಬಾತ ಆಟೋದಲ್ಲಿ ಕುಳಿತಿರುವುದನ್ನು ನೋಡಿದ ಗಿರೀಶ್ (32) ಎಂಬಾತ ಏಕಾಏಕಿ ಮಹೇಶ್ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದ. ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಮಹೇಶನನ್ನು ಕಂಡ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. ಕೂಡಲೇ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮಹೇಶ್ ಮೃತಪಟ್ಟಿದ್ದ.
ಮಹೇಶ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದೇ ಗ್ರಾಮದಲ್ಲಿ ಆರೋಪಿ ಗಿರೀಶ್ ಕೂಡ ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತಕ್ಷಣ ಮಾಹಿತಿ ತಿಳಿದ ಹುಲ್ಲಹಳ್ಳಿ ಪೊಲೀಸರು ಹಾಗೂ ಡಿವೈಎಸ್ಪಿ ಗೋವಿಂದರಾಜು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು.
ಆರೋಪಿ ಗಿರೀಶ್ ಬಂಧನ: ಆರೋಪಿ ಗಿರೀಶ್ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ವೃತ ನಿರೀಕ್ಷಕ ಚಂದ್ರಶೇಖರ್, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರಕಿ ಕಟ್ಟಿ ಭೇಟಿ ನೀಡಿ, ಪರಿಶೀಲಿಸಿದ್ದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹಾಡಹಗಲೇ ಮಚ್ಚಿನಿಂದ ಕೊಚ್ಚಿ ಯುವಕನ ಕೊಲೆ: ಆರೋಪಿ ಬಂಧನ