ಮೈಸೂರು: ತಿ.ನರಸೀಪುರ ಪಟ್ಟಣದ ವ್ಯಾಪಾರಿ ಮನೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳತನ ನಡೆದಿದೆ. ಕಳ್ಳರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಕಳ್ಳರ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಿದ್ದಾರೆ.
ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕ, ಸೌತ್ ಇಂಡಿಯನ್ ಆಯಿಲ್ ಮಿಲ್ಸ್, ಪತಂಜಲಿ ಫುಡ್, ಅಕ್ಷಯ ಫುಡ್ ಸೇರಿದಂತೆ ಪ್ರಮುಖ ಏಜೆನ್ಸಿಗಳನ್ನು ನಡೆಸುತ್ತಿರುವ ಓ.ಜಿ.ಶ್ರೀನಿವಾಸ್ ಅವರ ಮನೆಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ. 30 ಲಕ್ಷ ರೂ. ನಗದು ಹಣ ಸೇರಿದಂತೆ 1,67,20,000 ರೂ. ಬೆಲೆಯ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ. ಗಿರವಿ ಅಂಗಡಿ ನಡೆಸುತ್ತಿರುವ ಮಹಾವೀರ್ ಜೈನ್ ಎಂಬುವರು ಗ್ರಾಹಕರಿಂದ ಅಡವಿಟ್ಟುಕೊಂಡ ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ಶ್ರೀನಿವಾಸ್ ಅವರ ಮನೆಯ ಲಾಕರ್ನಲ್ಲಿ ಇರಿಸಿದ್ದರು. ಕಳ್ಳರು ಆ ಚಿನ್ನಾಭರಣಗಳನ್ನು ದೋಚಿದ್ದಾರೆ. ಶ್ರೀನಿವಾಸ್ ಅವರ ಪಕ್ಕದ ಮನೆಯಲ್ಲಿ ಮಹಾವೀರ್ ಜೈನ್ ವಾಸವಾಗಿದ್ದಾರೆ.
ಡಿಜಿಟಲ್ ಲಾಕರ್ಗೆ ಕನ್ನ ಹಾಕಿದ ಕಳ್ಳರು: ಓ.ಜಿ.ಶ್ರೀನಿವಾಸ್ ಅವರು ತಮ್ಮ ತಂದೆ, ತಾಯಿಯವರಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಮೈಸೂರಿಗೆ ತೆರಳಿದ್ದರು. ಬಳಿಕ ಅಲ್ಲೇ ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ 9.30 ರ ವೇಳೆಗೆ ಮನೆಗೆ ಬಂದ ವೇಳೆ ವಾರ್ಡ್ ರೂಂ ಬಾಗಿಲು ತೆರೆದು, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತ್ತು. ಪರಿಶೀಲಿಸಿದಾಗ ಲಾಕರ್ನ ಬೀಗ ತೆಗೆದು ಕಳ್ಳರು ಡಿಜಿಟಲ್ ಲಾಕರ್ ಒಡೆದು ಅಪಾರ ಪ್ರಮಾಣದಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಕದ್ದೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಹಿಂಬಾಗಿಲ ಕೊಂಡಿ ಮುರಿದು ಮನೆ ಒಳ ಪ್ರವೇಶಿಸಿರುವ ಕಳ್ಳರು, ಡಿಜಿಟಲ್ ಲಾಕರ್ನಲ್ಲಿದ್ದ 1 ಕೆ.ಜಿ.ಚಿನ್ನ, 10 ಕೆ.ಜಿ.ತೂಕದ ಬೆಳ್ಳಿ ಗಟ್ಟಿ, 70 ಚಿನ್ನದ ಹಾರ, ಕಲ್ಲರ್ ಬಿಟ್ ಬರುವ 70 ಚಿನ್ನದ ಹಾರ, 100 ಗ್ರಾಂ ಕರಿಮಣಿ ಹಾರ, 60 ಗುಂಡಿನ ಸರ, ಲಕ್ಷ್ಮಿ ಸರ, ಹುಲಿ ಉಗುರಿರುವ ಚಿನ್ನದ ಚೈನ್, ಬಿಳಿ ಕಲ್ಲಿನ ನಕ್ಲೇಸ್, ಮುತ್ತಿನ ಜುಮುಕಿ ಸೇರಿದಂತೆ ವಿವಿಧ ಮಾದರಿಯ ಚಿನ್ನಾಭರಣ ಸೇರಿ 30 ಲಕ್ಷ ನಗದು ಹಣ ಕದ್ದು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ದೇಹದೊಳಗೆ ಬಚ್ಚಿಟ್ಟು ₹45 ಲಕ್ಷ ಮೌಲ್ಯದ ಚಿನ್ನ ಸಾಗಾಟ, ಮಂಗಳೂರಿನಲ್ಲಿ ಆರೋಪಿ ವಶಕ್ಕೆ