ಮೈಸೂರು : ಕಬಿನಿ ಜಲಾಶಯದ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದಲೇ ನೀರು ಹರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಬಿನಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕಬಿನಿ ಜಲಾಶಯ ವ್ಯಾಪ್ತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಇಂದಿನ ನೀರಿನ ಲಭ್ಯತೆ ಮತ್ತು ಹಿಂದಿನ ವರ್ಷಗಳ ಅನುಭವದ ಮೇಲೆ ಈಗ ಈ ವ್ಯಾಪ್ತಿಯ ಎಲ್ಲಾ 52 ಕೆರೆಗಳಿಗೆ ನೀರು ತುಂಬಿಸಲು ಇಂದಿನಿಂದಲೇ ನೀರು ಬಿಡಲಾಗುವುದು ಎಂದು ಹೇಳಿದರು.
ಇಂದಿನಿಂದ 15 ದಿನಗಳವರೆಗೆ ಸುಮಾರು 1 ಟಿಎಂಸಿ ನೀರನ್ನು 52 ಕೆರೆಗಳಿಗೆ ತುಂಬಿಸಲು ನಿರ್ಣಯ ಮಾಡಿದ್ದೇವೆ. ಈಗ 14.5 TMC ನೀರು ಈಗ ಕಬಿನಿಯಲ್ಲಿ ಲಭ್ಯವಿದೆ. ಈ ಪೈಕಿ 5 ಟಿಎಂಸಿ ನೀರನ್ನು ನೀರಾವರಿ ಉದ್ದೇಶಕ್ಕೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಸಹ ಈ ಬಗ್ಗೆ ಮಾತನಾಡಿದ್ದಾರೆ. ನಾಲೆಯ ಕೊನೆಯ ಭಾಗಕ್ಕೆ ನೀರು ಕೊಂಡೊಯ್ಯಬೇಕಾಗಿದೆ. ಅದಕ್ಕಾಗಿ ತಕ್ಷಣ ಸಭೆ ಮಾಡುವಂತೆ ಕೇಳಿದ್ದರು ಎಂದರು.
ಕಾಲುವೆ ದುರಸ್ತಿ, ಹೂಳೆತ್ತುವ ಕೆಲಸವನ್ನು ತ್ವರಿತವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕೊನೆಯ ಭಾಗದ ಕೆರೆಗೆ ಜುಲೈ ಅಂತ್ಯದವರೆಗೆ ನೀರು ತುಂಬಿಸದಿದ್ದರೆ ಪ್ರತಿಭಟನೆಗೆ ಕೂರುವುದಾಗಿ ಶಾಸಕರು ಹೇಳಿದ್ದಾರೆ. ಈ ಅವಧಿಯೊಳಗೆ ನೀರು ತುಂಬಿಸಬೇಕು ಎಂಬ ಬೇಡಿಕೆಗೆ ನನ್ನ ಸಹಮತ ಇದೆ ಎಂದು ಹೇಳಿದರು.
ಕಬಿನಿಯಲ್ಲಿ ಉದ್ಯಾನವನ ನಿರ್ಮಾಣ ಮಾಡುವ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ತೆಗೆದುಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಆಗುತ್ತಿದೆ. ಒಂದೆರಡು ಸಂಸ್ಥೆಯವರು ಆಸಕ್ತಿವಹಿಸಿ ಮುಂದೆ ಬಂದಿದ್ದಾರೆ ಎಂದರು.
ನಂಜನಗೂಡು ವ್ಯಾಪ್ತಿಯಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕೆಲಸಗಳನ್ನು ತೆಗೆದುಕೊಳ್ಳಲು ಶಾಸಕರಾದ ಹರ್ಷವರ್ಧನ್ ಅವರು ಒಂದು ವರ್ಷದಿಂದ ಪ್ರಯತ್ನ ಮಾಡಿದ್ದರು. ಇದಕ್ಕೆ ಈಗ ಅನುದಾನ ಮಂಜೂರಾಗಿದೆ ಎಂದು ತಿಳಿಸಿದ್ರು. ಸಚಿವ ಎಸ್. ಸುರೇಶ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎನ್. ಮಹೇಶ್, ಅನಿಲ್ ಚಿಕ್ಕಮಾದು, ಅಶ್ವಿನ್ ಕುಮಾರ್, ಹರ್ಷವರ್ಧನ್ ಹಾಜರಿದ್ದರು.