ಮೈಸೂರು: ನಂಜನಗೂಡು ತಾಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಕಳೆದ ವರ್ಷ ಸುರಿದ ಭಾರೀ ಮಳೆಗೆ ರೈತನೋರ್ವನ ಮನೆ ಕೊಚ್ಚಿ ಹೋಗಿತ್ತು. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ನೆರೆ ಪರಿಹಾರ ಸಿಗದೆ ಇಂದಿಗೂ ರೈತ ನಿರಾಶ್ರಿತನಾಗಿದ್ದಾನೆ.
ಕಪ್ಪಸೋಗೆ ಗ್ರಾಮದಲ್ಲಿ ಮಹಾದೇವಪ್ಪ ಎಂಬ ರೈತ ತನ್ನ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದಾನೆ. ಧಾರಾಕಾರ ಮಳೆಗೆ ಮನೆ ಕುಸಿದ ಪರಿಣಾಮ ಇವರ ಕುಟುಂಬದವರು ಕೂದಲೆಳೆ ಅಂತರದಲ್ಲಿ ಬದುಕುಳಿದಿದ್ದರು. ಕುಸಿದ ಮನೆಯ ಫೋಟೋ ತೆಗದುಕೊಂಡು ಹೋದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು, ಸರ್ಕಾರಕ್ಕೆ ಮನೆ ಕುಸಿದಿದೆ ಎಂದು ಹೇಳುವ ಬದಲು ದನಕರುಗಳನ್ನು ಕಟ್ಟುವ ಕೊಟ್ಟಿಗೆ ಕುಸಿದಿದೆ ಎಂದು ಹೇಳಿದ್ದಾರೆ.
ಕಂದಾಯ ಇಲಾಖೆಯ ಲೆಕ್ಕಾಧಿಕಾರಿಗಳು ಈ ರೈತ ಕುಟುಂಬಕ್ಕೆ ಕೇವಲ 2,100 ರೂ. ಚೆಕ್ ನೀಡಿ ಅನ್ಯಾಯ ಎಸೆಗಿದ್ದಾರೆ ಎಂದು ಆರೋಪಿಸಲಾಗಿದೆ. ಅತ್ತ ಮನೆಯೂ ಇಲ್ಲದೆ, ಇತ್ತ ಸರ್ಕಾರದಿಂದ ಪರಿಹಾರವೂ ಇರದೆ ರೈತ ಕುಟುಂಬ ಬೀದಿಗೆ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಿರಾಶ್ರಿತ ರೈತ ಮಹಾದೇವಪ್ಪ ನಮಗೆ ಸರ್ಕಾರದಿಂದ ಕೇವಲ 2,100 ರೂ. ಚೆಕ್ ಬಿಟ್ಟರೆ ಯಾವ ಹಣವೂ ಬಂದಿಲ್ಲ. ಚೆಕ್ನ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ವಾಪಸ್ ಮಾಡಿದ್ದೇವೆ. ನಮಗೆ ಪರಿಹಾರ ಸಿಗದಿದ್ದರೆ ನಾನು ಮತ್ತು ನನ್ನ ಕುಟುಂಬದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.