ಮೈಸೂರು : ಸಮ್ಮಿಶ್ರ ಸರ್ಕಾರ ಕೆಡವಲು ಕಾರಣವಾಗಿರುವ ಅನರ್ಹ ಶಾಸಕರ ವಿರುದ್ಧ ಮಾಜಿ ಸಚಿವ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿ, ಮೂಲೆಯಲ್ಲಿದ್ದವರನ್ನ ಕರೆದು ಅಧಿಕಾರ ನೀಡಿದ್ರೆ ಅವರು, ನಮಗೆ ಮೋಸ ಮಾಡಿ ಹೋದರು ಎಂದು ಕಿಡಿ ಕಾರಿದರು.
ಹುಣಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವರಾಜ ಅರಸು ಅವರು ಸಾಮಾಜಮುಖಿಯಾಗಿ ಕೆಲಸ ಮಾಡಿದ್ದರು. ಆದರೆ ಅವರ ಹೆಸರು ಹೇಳಿಕೊಂಡು ಚುನಾವಣೆಗೆ ನಿಂತು ಗೆದ್ದ ನಂತರ ವಿಶ್ವನಾಥ್ ಏನು ಮಾಡಿದರು, ಎಂಬುದು ಜನರಿಗೆ ಗೊತ್ತಿದೆ. ಅವರಿಗೆ ಜನತಾ ನ್ಯಾಯಾಲಯ ತಕ್ಕ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಜೆಡಿಎಸ್ ಸ್ಟ್ಯಾಂಡ್ ಇಲ್ಲ ಅಂತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ಹಾಗೂ ಬಿಜೆಪಿಯನ್ನು A,B ಟೀಂ ಎಂದು ಛೇಡಿಸಿದ್ದರು, ಆದರೆ ಫಲಿತಾಂಶ ಏನಾಯಿತು, ಎಲ್ಲರಿಗೂ ಗೊತ್ತಿದೆ ಎಂದರು. ಜಿ.ಟಿ.ದೇವೇಗೌಡ ಚುನಾವಣೆಯಿಂದ ದೂರ ಇದ್ದಾರೆ. ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬುವುದು ಗೊತ್ತಾಗುತ್ತೆ ಬಿಡಿ ಎಂದರು.