ಮೈಸೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಲು ರಾಜ್ಯ ಸರ್ಕಾರವೇ ಕಾರಣವೆಂದು ಆರೋಪಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಮಾಡುವಂತೆ ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್ವೋರ್ವರು ಜಾಗಟೆ ಬಾರಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಲ್ಲಿನ ಟೌನ್‌ಹಾಲ್ ಬಳಿ ಏಕಾಂಗಿ ಜಾಗಟೆ ಚಳವಳಿ ನಡೆಸಿರುವ ನಿವೃತ್ತ ಜೂನಿಯರ್ ಇಂಜಿನಿಯರ್ ಮುದ್ದುವೆಂಕಟಪ್ಪ, ಕೂಡಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಿಜೆಪಿ ನಾಯಕರು ಕೋವಿಡ್ ಕಾಲಘಟ್ಟದಲ್ಲೂ ಪಂಚ ರಾಜ್ಯ ಚುನಾವಣೆ ವೇಳೆ ಱಲಿ ನಡೆಸಿ ಕೋವಿಡ್ ಸೋಂಕು ಹೆಚ್ಚಲು ಕಾರಣಕರ್ತರಾಗಿದ್ದಾರೆ. ಅಲ್ಲದೇ ಕುಂಭಮೇಳದ ಮೂಲಕ ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಲಾಕ್‌ಡೌನ್ ಘೋಷಣೆ ಮಾಡುವ ಮೊದಲು ಸರ್ಕಾರವು ಜನರಿಗೆ ಅಗತ್ಯ ದಾಸ್ತಾನು, ಪರಿಹಾರವನ್ನು ನೀಡಬೇಕಿತ್ತು. ಆದರೆ ಜವಾಬ್ದಾರಿಯಿಂದ ನುಣುಚಿಕೊಂಡಿರುವ ಸರ್ಕಾರವು ತಕ್ಷಣವೇ ಲಾಕ್‌ಡೌನ್ ಘೋಷಿಸಿ ಬಡವರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಣ್ಣು ತರಕಾರಿ ಮಾರುವ ಬಡ ವ್ಯಾಪಾರಿಗಳಿಂದ ದಂಡ ಸಂಗ್ರಹಿಸಲಾಗುತ್ತಿದೆ. ಈ ರೀತಿ ಸಂಗ್ರಹಿಸಿದ ಹಣ ಕೋಟಿಗಟ್ಟಲೆ ಎಂದು ರಾಜ್ಯ ಸರ್ಕಾರ ನಾಚಿಕೆ ಬಿಟ್ಟು ಹೇಳಿಕೊಳ್ಳುತ್ತಿದೆ. ಪಕ್ಕದ ರಾಜ್ಯಗಳು ನೀಡಿರುವ ಲಾಕ್‌ಡೌನ್ ಪ್ಯಾಕೇಜ್‌ಗಳನ್ನು ನೋಡಿ ಸರ್ಕಾರವು ರಾಜ್ಯದ ಜನತೆಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಜನ ಇಂದು ಬೀದಿಗೆ ಬಂದರೆ ಪೊಲೀಸರು ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಅವರಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ಮನೆ ಮನೆಗೆ ಪೂರೈಸಿದರೆ ಈ ರೀತಿ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದರು.
ಇದನ್ನೂ ಓದಿ: ಅಗತ್ಯ ವಸ್ತು ಖರೀದಿಗೆ ನಡೆದುಕೊಂಡೇ ಹೋಗಬೇಕು, ಬೈಕ್ ತಂದ್ರೆ ಸೀಜ್: ಮಂಡ್ಯ ಎಸ್ಪಿ