ಮೈಸೂರು: ಕೊರೊನಾ ಹಿನ್ನೆಲೆ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ಈಗ ದೀಪಾವಳಿ ಹಬ್ಬ ಬಂದಿದೆ. ಹಾಗಾಗಿ ಮೈಸೂರಿನ ಆಯ್ದ ಕೆಲ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಮೇರೆಗೆ ಹಸಿರು ಪಟಾಕಿಗಳನ್ನು ಸಿಡಿಸುವುದಕ್ಕೆ ಅವಕಾಶವಿದೆ. ನಗರದಲ್ಲಿ ಕೇವಲ ಆಯ್ದ ಸ್ಥಳಗಳಲ್ಲಿ ಮಾತ್ರ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಿದ್ದು, ಇದೀಗ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಚಾಮರಾಜೇಂದ್ರ ಮೃಗಾಲಯ, ಕುಕ್ಕರಹಳ್ಳಿ ಹಾಗೂ ಕಾರಂಜಿ ಕೆರೆ ಪ್ರದೇಶ, ಲಿಂಗಾಬುದಿ ಕೆರೆ, ಸಾರ್ವಜನಿಕ ಉದ್ಯಾನಗಳು, ಆಸ್ಪತ್ರೆ, ನರ್ಸಿಂಗ್ ಹೋಂ, ಶೈಕ್ಷಣಿಕ ಸಂಸ್ಥೆಗಳು, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳ ನೂರು ಮೀಟರ್ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಷೇಧ ವಿಧಿಸಲಾಗಿದೆ.
ನೂರು ಮೀಟರ್ ವ್ಯಾಪ್ತಿಯೊಳಗೆ ನಿಶಬ್ಧ ವಲಯವೆಂದು ಘೋಷಣೆ ಮಾಡಲಾಗಿದ್ದು, ನವೆಂಬರ್ 13ರ ಬೆಳಗ್ಗೆ 6ರಿಂದ ನವೆಂಬರ್ 16ರ ಮಧ್ಯರಾತ್ರಿ 12ರವರೆಗೆ ಪಟಾಕಿ ಸಿಡಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ವಾಯು ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.