ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಕಸರತ್ತು ಮಾಡುತ್ತಿರುವ ಬೆನ್ನಲೆ ಆಕ್ಷಾಂಕಿಗಳ ಪಟ್ಟಿಯಲ್ಲಿರುವ ರಮೇಶ್ ಜಾರಕಿಹೊಳಿ ಹಾಗೂ ಟೀಂ ಮೈಸೂರಿನಲ್ಲಿ ಟೆಂಪಲ್ ರನ್ ನಡೆಸಿದೆ.
ನಂಜನಗೂಡು ತಾಲೂಕಿನ ನಂಜುಂಡೇಶ್ವರ ದೇವಸ್ಥಾನಕ್ಕೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಠಳ್ಳಿ, ಶ್ರೀಮಂತ ಪಾಟೀಲ್ ಹಾಗೂ ಅರ್.ಶಂಕರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದರು.
ನಂಜನಗೂಡು ದೇವಸ್ಥಾನದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ, ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರ ಬರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೆವು, ದೇವರು ನಮಗೆ ಆಶೀರ್ವಾದ ಮಾಡಿದ್ದಾನೆ. ಆದ್ದರಿಂದ ದೇವರ ದರ್ಶನ ಮಾಡಲು ಬಂದಿದ್ದೇವೆ. ಗೆದ್ದಿರುವ 11 ಮಂದಿಗೆ ಹಾಗೂ ಸೋತಿರುವವರಿಗೂ ಸಚಿವ ಸ್ಥಾನ ಕೊಡುವ ವಿಶ್ವಾಸವಿದೆ. ಸಮ್ಮಿಶ್ರ ಸರ್ಕಾರ ಕೆಡವಲು 17 ಜನರ ಪಾತ್ರ ಮುಖ್ಯವಾಗಿದೆ. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ನೀಡುವಂತೆ ಕೇಳ್ತೇವೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದರು. ಅನರ್ಹ ಶಾಸಕ ಆರ್.ಶಂಕರ್ ಮಾತನಾಡಿ, ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ ಎಂದರು.