ಮೈಸೂರು : ಪ್ಲಾಟ್ಫಾರಂನಲ್ಲಿ ರೈಲ್ವೆ ಮೆಕಾನಿಕ್ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮೈಸೂರು ರೈಲ್ವೆ ಮೆಕಾನಿಕ್ ವಿಭಾಗದ ಹಿರಿಯ ಸೆಕ್ಷನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಭು (45) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ರೈಲ್ವೆ ನಿಲ್ದಾಣದ ಪ್ಲಾಟ್ಫಾರಂ ನಂ. 6ರಲ್ಲಿ ಘಟನೆ ನಡೆದಿದೆ. ಮೃತ ಪ್ರಭು ಅವಿವಾಹಿತರಾಗಿದ್ದು, ತಾಯಿಯೊಂದಿಗೆ ಮೈಸೂರು ನಗರದ ಗೋಕುಲಂನಲ್ಲಿ ವಾಸವಿದ್ದ. ಬುಧವಾರ ಮಧ್ಯಾಹ್ನ 1.30 ರ ಸಮಯದಲ್ಲಿ ಈತ ಪ್ಲಾಟ್ಫಾರಂ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು ಬಂದಿಲ್ಲ.
ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ರೈಲ್ವೆ ಪೊಲೀಸರು ಆಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೆ ಆರ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನು ಹಾಗೂ ಇತರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಪ್ರತ್ಯೇಕ ಘಟನೆ, ಬಾಯ್ಲರ್ ಬೆಲ್ಟ್‌ಗೆ ಸಿಲುಕಿ ಕಾರ್ಮಿಕ ಸಾವು: ಬಾಯ್ಲರ್ ಬೆಲ್ಟ್‌ಗೆ ಸಿಲುಕಿ ಕಾರ್ಮಿಕ ಮೃತಪಟ್ಟ ಘಟನೆ ಮಂಡ್ಯದ ಮೈಶುಗರ್ ಕಾರ್ಖಾನೆಯಲ್ಲಿ ನಡೆದಿದೆ. ಬಿಹಾರ ಮೂಲದ ರಾಕೇಶ್ (22) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ರಾಕೇಶ್ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದರು. ಕಾರ್ಮಿಕ ನಿನ್ನೆ ನೈಟ್ ಶಿಫ್ಟ್ ಕೆಲಸದಲ್ಲಿದ್ದ. ಇಂದು ಬೆಳಗ್ಗೆ 7.30ರ ವೇಳೆಗೆ ಬೂದಿ ತೆಗೆಯುವ ಮಷಿನ್ ಬೆಲ್ಟ್‌ಗೆ ಸಿಲುಕಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸಹ ಸಿಬ್ಬಂದಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಈ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ವಿಚಾರಣೆಗೆ ಕರೆತಂದಿದ್ದ ಯುವಕ ಆತ್ಮಹತ್ಯೆ, ಇಬ್ಬರು ಪೊಲೀಸ್ ಸಿಬ್ಬಂದಿ ಅಮಾನತು