ಮೈಸೂರು: ಜಿಲ್ಲೆಯ ಹೆಗ್ಗಡದೇವನಕೊಟೆ (ಪ.ಪಂ) ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಬಂದ ಖಚಿತ ಮಾಹಿತಿ ಮೇರೆಗೆ ವಡ್ಡರಗುಡಿ ಹಾಡಿ ಸಮೀಪವಿರುವ ಡ್ರಿಪ್ ಸಿದ್ದನಾಯಕ ಅವರಿಗೆ ಸೇರಿದ ತೋಟದ ಮೇಲೆ ದಾಳಿ ನಡೆಸಿದ 50 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಹೆಗ್ಗಡದವನಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಕುಮುದಾ ಶರತ್, ಸಹಾಯಕ ಚುನಾವಣಾಧಿಕಾರಿಯಾದ ಪಿ.ಎಸ್. ಮಹೇಶ್, ಪೊಲೀಸ್ ನಿರೀಕ್ಷಕರಾದ ಶಬ್ಬೀರ್ ಹುಸೇನ್, ಲಕ್ಷ್ಮಿಕಾಂತ್, ಪೊಲೀಸ್ ಉಪನಿರೀಕ್ಷಕರಾದ ರಸುಲ್, ಶರವಣ, ರವಿಶಂಕರ್ ಹಾಗೂ ಇತರೆ ಅಧಿಕಾರಿಗಳು ದಾಳಿ ಸಮಯದಲ್ಲಿ ಉಪಸ್ಥಿತರಿದ್ದರು.
ರಾಜ್ಯದಲ್ಲಿ ಒಟ್ಟು 375 ರೂ. ಕೋಟಿ ಮೌಲ್ಯದ ನಗದು ವಶ: ಬಹಿರಂಗ ಪ್ರಚಾರಕ್ಕೆ (ಸೋಮವಾರ) ತೆರೆ ಬಿದ್ದಿದ್ದು, ಈವರೆಗೆ ಚುನಾವಣಾ ಆಯೋಗವು ಸುಮಾರು 375.60 ಕೋಟಿ ರೂ. ಮೌಲ್ಯದ ನಗದು, ಮದ್ಯ ಮತ್ತು ಅಕ್ರಮ ವಸ್ತುಗಳನ್ನು ವಶಕ್ಕೆ ಪಡೆದಿದೆ. ಒಟ್ಟು 24.21 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆ, 83.66 ಕೋಟಿ ಮೌಲ್ಯದ ಒಟ್ಟು 22.27 ಲಕ್ಷ ಲೀಟರ್ ಮದ್ಯ, 23.66 ಕೋಟಿ ಮೌಲ್ಯದ 1,954 ಕೆಜಿ ಡ್ರಗ್ಸ್ ಹಾಗೂ 96.59 ಕೋಟಿ ಮೌಲ್ಯದ ಚಿನ್ನ, ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ.
ಮುಧೋಳದಲ್ಲಿ ₹5 ಕೋಟಿ ಹಣ ಜಪ್ತಿ: ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭೆ ಕ್ಷೇತ್ರದ ಲಕ್ಷಾನಟ್ಟಿ ಚೆಕ್ಪೋಸ್ಟ್ ಬಳಿ ಅಧಿಕಾರಿಗಳು ಕೆಳೆದ ಶನಿವಾರ ವಾಹನದಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 5 ಕೋಟಿ ರೂಪಾಯಿ ನಗದು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿಯಿಂದ ಮುಧೋಳಕ್ಕೆ ತೆರಳುತ್ತಿದ್ದ ವಾಹನವನ್ನು ಎಸ್ಎಸ್ಟಿ ತಂಡ ಪರಿಶೀಲನೆ ನಡೆಸಿದಾಗ ವಾಹನದಲ್ಲಿದ್ದ ವ್ಯಕ್ತಿ ಹಣ ಯೂನಿಯನ್ ಬ್ಯಾಂಕ್ಗೆ ಸೇರಿದೆ ಎಂದಿದ್ದಾರೆ. ಆದರೆ ವ್ಯಕ್ತಿಯ ಹೆಸರು, ಹುದ್ದೆ ಹಾಗೂ ಚಾಲಕ, ಬ್ಯಾಂಕ್ ಟ್ಯಾಗ್ಸ್ ಹಾಗೂ ಬ್ಯಾಂಕ್ ಕೋಡ್ ಸೇರಿದಂತೆ ಇತರೆ ದಾಖಲೆಗಳು ಕಂಡುಬಾರದ ಕಾರಣ ಹಣ ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬ್ಯೂಟಿಪಾರ್ಲರ್ಗೆ ರೆಡಿಯಾಗುವ ನೆಪದಲ್ಲಿ ಹೋದ ವಧು ಪರಾರಿ; ನಾಲ್ಕು ದಿನಗಳಿಂದ ಕುಟುಂಬಸ್ಥರ ಹುಡುಕಾಟ
ಹಣ ಹಂಚುತ್ತಿದ್ದವರನ್ನು ಬೆನ್ನಟ್ಟಿ ಹಿಡಿದ ಜಿಲ್ಲಾಧಿಕಾರಿ: ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರವಾಗಿ ಹಣ ಹಂಚಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಳೆದ ರಾತ್ರಿ ಖುದ್ದು ಡಿಸಿ ಪರಿಶೀಲನೆಗೆ ಆಗಮಿಸಿದ್ದರು. ಜಿಲ್ಲಾಧಿಕಾರಿ ಆಗಮಿಸುತ್ತಿದ್ದಂತೆ ಹಣ ಹಂಚುತ್ತಿದ್ದವರು ವೇಗವಾಗಿ ಕಾರ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಡಿಸಿ ಕೂಡ ತಮ್ಮ ಕಾರಿನಲ್ಲಿ ಪರಾರಿಯಾಗುತ್ತಿದ್ದವರ ಕಾರ್ ಬೆನ್ನಟ್ಟಿದ್ದಾರೆ. ಈ ವೇಳೆ ಕಾರ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ವಿದ್ಯಾನಗರ ಹನುಮಾನ ದೇವಸ್ಥಾನ ಬಳಿ ಕಾರಿಂದಿಳಿದು ಹಣವುಳ್ಳ ಬ್ಯಾಗ್‌ನೊಂದಿಗೆ ಪರಾರಿಯಾಗಿದ್ದಾರೆ ಎಂದು ಬೇರೊಂದು ಪಕ್ಷದ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಕಾರ್ನಲ್ಲಿ ಪ್ರಚಾರದ ಕೈಪಿಡಿ, ಪಾಂಪ್ಲೆಂಟ್ಸ್ ಸಿಕ್ಕಿವೆ.
ಇದನ್ನೂ ಓದಿ: ಆನ್‌ಲೈನ್ ಕ್ರಿಕೆಟ್ ಬೆಟ್ಟಿಂಗ್: ಶಿವಮೊಗ್ಗದಲ್ಲಿ ನಾಲ್ವರು ಸೆರೆ, ₹25 ಲಕ್ಷ ವಶಕ್ಕೆ