ಮೈಸೂರು: ಶಿವಮೊಗ್ಗದಲ್ಲಿ ನಡೆದಿರುವ ಘಟನೆ ನಿಜಕ್ಕೂ ದುರದೃಷ್ಟಕರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಮೈಸೂರಿನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಹೇಳಿಕೆ ನೀಡಿದ್ದಾರೆ.
ಇಂದು ನಗರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದಿರುವ ಘಟನೆ ದುರದೃಷ್ಟಕರ. ಕರ್ನಾಟಕ ಶಾಂತಿಯುತವಾದ ನಾಡು. ಆದರೆ, ಇಂತಹ ಘಟನೆಗಳಿಂದ ಕರ್ನಾಟಕಕ್ಕೆ ಕಪ್ಪು ಚುಕ್ಕೆ ಎಂದರು. ಶಿವಮೊಗ್ಗದಲ್ಲಿ ನಡೆದಿರುವ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷ ಅವರ ಕೊಲೆಗೆ ಸರ್ಕಾರವೇ ನೇರವಾದ ಹೊಣೆಯನ್ನು ಹೊರಬೇಕು. ಸರ್ಕಾರ ಸರಿಯಾದ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಪಾಲಿಸಿದ್ದರೇ ಈ ರೀತಿಯ ಘಟನೆ ನಡೆಯುತ್ತಿರಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಸಚಿವ ಈಶ್ವರಪ್ಪ ಎಲ್ಲರೂ ಶಿವಮೊಗ್ಗ ಜಿಲ್ಲೆಯವರೇ ಆಗಿದ್ದಾರೆ. ಗೃಹ ಸಚಿವರ ಜಿಲ್ಲೆಯಲ್ಲೇ ಈ ರೀತಿಯಾದರೇ ಉಳಿದವರ ಪರಿಸ್ಥಿತಿ ಹೇಗೆ? ಎಂದರು. ಹರ್ಷ ಕೊಲೆ ಪ್ರಕರಣ ಕುರಿತು ಸಮಗ್ರ ತನಿಖೆಯಾಗಬೇಕು. ಜೊತೆಗೆ ಸಚಿವ ಕೆ. ಎಸ್ ಈಶ್ವರಪ್ಪ ಅವರು ರಾಷ್ಟ್ರ ಧ್ವಜದ ವಿಚಾರದಲ್ಲಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಎಲುಬಿಲ್ಲದ ನಾಲಗೆ ಎಂದು ಇಷ್ಟ ಬಂದ ರೀತಿ ಹೇಳಿಕೆ ನೀಡುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವಂತವರು ನಾಲಗೆಯನ್ನು ಹರಿ ಬಿಡಬಾರದು ಎಂದು ಹೇಳಿದರು.
ಮೇಕೆದಾಟು ಪಾದಯಾತ್ರೆಯ ಬಗ್ಗೆ ಮಾತನಾಡಿದ ಅವರು, ಪಾದಯಾತ್ರೆ ಪುನಃ ಆರಂಭವಾಗಲಿದೆ. ಈ ಬಾರಿ ಐದು ದಿನಗಳ ಕಾಲ ಮಾತ್ರ ಪಾದಯಾತ್ರೆಗೆ ಸೀಮಿತವಾಗಿದೆ ಎಂದರು. ರಾಮನಗರದಲ್ಲಿ ಆರಂಭವಾಗುವ ಪಾದಯಾತ್ರೆ ಬೆಂಗಳೂರಿನಲ್ಲಿ ಅಂತ್ಯವಾಗುತ್ತದೆ. ನಮ್ಮ ನೀರು ನಮ್ಮ ಹಕ್ಕಿಗಾಗಿ ನಡೆಸುತ್ತಿರುವ ಈ ಪಾದಯಾತ್ರೆಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೆಂಬಲ ನೀಡಬೇಕು ಎಂದು ಮನವಿ ಕೆಪಿಸಿಸಿ ಕಾರ್ಯಧ್ಯಕ್ಷ ಆರ್. ಧ್ರುವನಾರಾಯಣ್ ಮನವಿ ಮಾಡಿದರು.
ಓದಿ: ಕಾರಾಗೃಹಗಳಲ್ಲಿ ಗಾಂಜಾ ಬಳಕೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್