ಮೈಸೂರು: ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹಾಗೂ ಶಾಸಕ ಬಸನಗೌಡ ಪಾಟೀಲ್ಗೆ ಅವರ ಪಕ್ಷದ ಹೈಕಮಾಂಡ್ನ ನೇರ ಬೆಂಬಲವಿದೆ. ಹಾಗಾಗಿಯೇ ಈ ಇಬ್ಬರು ಏನು ಮಾತನಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಆರೋಪಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರು ಮುಖ್ಯಮಂತ್ರಿಗಳ ವಿರುದ್ಧ 20 ಸಾವಿರ ಕೋಟಿ ರೂ.ನ ಭ್ರಷ್ಟಾಚಾರ ಆರೋಪ ಮಾಡುತ್ತಾರೆ. ಅಲ್ಲದೇ ಯತ್ನಾಳ್ ಅವರು ಸಾಕಷ್ಟು ಟೀಕೆ ಮಾಡುತ್ತಾರೆ. ಆದರೆ ಬಿಜೆಪಿ ಹೈಕಮಾಂಡ್ ಅವರಿಗೆ ನೋಟಿಸ್ ನೀಡಿಲ್ಲ. ಇದನ್ನು ಗಮನಿಸಿದರೆ ಹೈಕಮಾಂಡ್ ಅವರ ಬೆಂಬಲಕ್ಕೆ ನೇರವಾಗಿ ನಿಂತಿದೆ ಅನಿಸುತ್ತೆ ಎಂದರು.
ರಾಜ್ಯದಲ್ಲಿ ಕೋವಿಡ್ಗೆ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಕೊರೊನಾ ಸಂದರ್ಭದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು. ಆದರೆ, ಸಚಿವರು ಅಧಿಕಾರಿಕ್ಕಾಗಿ ಪರಸ್ಪರ ಕಿತ್ತಾಡಿಕೊಂಡು, ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಜನಪರ ಕೆಲಸ ಮಾಡುತ್ತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಕಿಕ್ ಬ್ಯಾಕ್ ಆರೋಪ, ಸುಪ್ರೀಂ ನ್ಯಾಯಮೂರ್ತಿಗಳಿಂದಲೇ ತನಿಖೆ ಆಗಲಿ : ಮಾಜಿ ಶಾಸಕ ನಾಡಗೌಡ ಒತ್ತಾಯ
ಕೊರೊನಾದಿಂದ ಕಂಗೆಟ್ಟಿರುವ ರೈತರು, ಬೆಳೆಗೆ ಬೆಲೆ ಇಲ್ಲದೇ ಕಂಗಾಲಾಗಿದ್ದಾರೆ. ಈ ನಡುವೆ ಗೊಬ್ಬರ ದರ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.