ಮೈಸೂರು : ಯಾರು ಕಾಣೆಯಾಗಿದ್ದಾರೆ, ಮಲಗಿದ್ದಾರೆ, ಎದ್ದು ಬಿದ್ದು ಓಡ್ತಿದ್ದಾರೆ ಎಂಬ ಬಗ್ಗೆ ಜನರನ್ನೇ ಕೇಳಬೇಕು ಎನ್ನುತ್ತಾ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ತಿರುಗೇಟು ಕೊಟ್ಟರು. ನಂಜನಗೂಡು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ನಂಜನಗೂಡು ಕ್ಷೇತ್ರದಲ್ಲಿ ಕಾಣೆಯಾಗಿದ್ದಾರೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದರು.
ಜನರ ಬಳಿ ಕೇಳಿದರೆ ಯಾರು ಕಾಣೆಯಾಗಿದ್ದಾರೆ, ಯಾರು ಮಲಗಿದ್ದಾರೆ, ಯಾರು ಎದ್ದು ಬಿದ್ದು ಓಡಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಗೆದ್ದವರೇ ಓಡಾಡಬೇಕು. ಆದರೆ, ಇಲ್ಲಿ ನಾನು ಸೋತ ಮೇಲೂ ಓಡಾಡುತ್ತಿದ್ದೇನೆ. ಜನರ ಕೆಲಸ ಮಾಡೋಕೆ ಅಧಿಕಾರ ಇರಲೇಬೇಕು ಎಂದೇನಿಲ್ಲ. ಕೋವಿಡ್ ಸಮಯದಲ್ಲಿ ನಾವು ನಮ್ಮ ಕೆಲಸ ತೋರಿಸಿದ್ದೇವೆ ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹಸು ಎಮ್ಮೆ ಮೇಯಿಸುತ್ತಿರಬೇಕು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿ, ಹಸು ಎಮ್ಮೆ ಮೇಯಿಸುವುದು ನಮ್ಮ ಕಾಯಕ. ಅದನ್ನು ನಾನು ರೈತನ ಮಗನಾಗಿ ಬಹಳ ಸಂತೋಷದಿಂದ ಸ್ವೀಕರಿಸುತ್ತೇನೆ. ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ. ನಾವು ದನಗಳಿಗೆ ಪೂಜೆ ಮಾಡುತ್ತೇವೆ. ಹುಲ್ಲು ಹಾಕಿ ಮೇಯಿಸುತ್ತೇವೆ. ಅದು ನಮ್ಮ ಜೀವಾಳ. ಹಾಗಾಗಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರಿಗೆ ದನ ಕಾಯುವವರ ಬಗ್ಗೆ ರೈತರ ಬಗ್ಗೆ ಏನ್ ಗೊತ್ತಿದೆ ಪಾಪ?. ಹಿರಿತನ ಇರುವ ನಾಯಕರು ಈ ರೀತಿಯ ಮಾತು ಮಾತನಾಡಬಾರದಿತ್ತು. ಶ್ರೀನಿವಾಸ್ ಪ್ರಸಾದ್ ಅವರು ಹಿರಿಯ ನಾಯಕರು. ಅವರ ಬಾಯಲ್ಲಿ ಈ ರೀತಿ ಮಾತು ಬರಬಾರದು ಎಂದು ನಾನು ಖಂಡಿಸುತ್ತೇನೆ ಎಂದರು.
ಬಿಜೆಪಿ ವಿರುದ್ಧ ಲೋಕಾಯುಕ್ತಕ್ಕೆ ದೂರು- ಎಂ.ಲಕ್ಷ್ಮಣ್: ಬಿಜೆಪಿಯ ಎಲ್ಲ ಶಾಸಕರು, ಸಚಿವರ ಮೇಲೆ ಏಕಕಾಲಕ್ಕೆ ದಾಳಿ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕರು, ಸಚಿವರ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದರೆ, ನಮಗಿರುವ ಮಾಹಿತಿ ಪ್ರಕಾರ ಸುಮಾರು 10 ಸಾವಿರ ಕೋಟಿ ನಗದು ದೊರೆಯುತ್ತದೆ. ವಿಧಾನಸಭೆ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ದೂರಿದರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆಯಲ್ಲಿ ನಡೆದಿರುವ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ವರದಿ ಸಲ್ಲಿಸಿದ್ದರೂ ಮುಖ್ಯಮಂತ್ರಿಗಳು ಮೌನವಹಿಸಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವಧಿಯಲ್ಲಿ ತನಿಖೆ ನಡೆಸಲಾಗಿತ್ತು. ಆದರೀಗ ಲೋಕಾಯುಕ್ತ ದಾಳಿಯಿಂದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಸಿಕ್ಕಿಬಿದ್ದಿದ್ದಾರೆ.
ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಎಸ್ಕಾಂಗಳ ವ್ಯಾಪ್ತಿಯಲ್ಲಿ ಐಪಿ ಸೆಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವ ಉದ್ದೇಶದ 800 ಕೋಟಿ ರೂ ಮೊತ್ತದ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿ ಹಗರಣ ನಡೆಯುತ್ತಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ದಾಖಲೆಗಳೊಂದಿಗೆ ದೂರು ನೀಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಗರಾಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಹೇಶ್, ಸಾಬುದ್ದೀನ್ ಹಾಗು ಮಹದೇವ್ ಇದ್ದರು.
ಇದನ್ನೂ ಓದಿ: ಭ್ರಷ್ಟಾಚಾರ ವಿರೋಧಿಸಿ ಮಾ. 9 ರಂದು ಕರ್ನಾಟಕ ಬಂದ್: ಡಿಕೆಶಿ