ಮೈಸೂರು : ಐಪಿಎಸ್ ಅಧಿಕಾರಿ ಡಿ. ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವಿನ ವಾಕ್ಸಮರಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. "ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ. ಇದಕ್ಕೆ ಸಂಬಂಧಪಟ್ಟವರು ಉತ್ತರ ನೀಡಬೇಕು" ಎಂದರು. ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ, "ಸಿದ್ದರಾಮಯ್ಯನವರ ಸರ್ಕಾರದಲ್ಲೂ ಹಲವು ಅಧಿಕಾರಿಗಳು ಈ ರೀತಿಯ ವರ್ತನೆ ತೋರಿದ್ದರು. ಆದರೂ ಅವರ ಸರ್ಕಾರ ಏನನ್ನೂ ಮಾಡಲಿಲ್ಲ" ಎಂದು ಟೀಕಿಸಿದರು.
ಸರ್ವಿಸ್ ರೋಡ್ ನಂತರ ಹೈವೇ ಉದ್ಘಾಟನೆ: ಬೆಂಗಳೂರು-ಮೈಸೂರು ನಡುವಿನ ಹೈವೇಯಲ್ಲಿ ಸರ್ವಿಸ್ ರಸ್ತೆ ಮಾಡಿಲ್ಲ ಎಂದು ಮಂಡ್ಯದ ಬಳಿ ರೈತರು ಹೈವೇಗೆ ಎತ್ತಿನ ಗಾಡಿ ತಂದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಎಲ್ಲೆಡೆ ಸರ್ವಿಸ್ ರಸ್ತೆ ಮಾಡಿದ ನಂತರವೇ ಹೆದ್ದಾರಿ ಉದ್ಘಾಟನೆ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪ್ರತಾಪ್ ಸಿಂಹ ಹೇಳಿದರು.
"ಬಿಜೆಪಿ ಸಾಧನೆ ಮಾಡಿದೆ ಎಂದು ಎಲ್ಲೆಡೆ ಫ್ಲೆಕ್ಸ್ ಹಾಕಿಕೊಂಡು ಬರುತ್ತಿರುವ ಜಾಗಗಳಲ್ಲಿ ಕಾಂಗ್ರೆಸ್ ಜನರಿಗೆ ಬಿಜೆಪಿ ಕಿವಿಯ ಮೇಲೆ ಹೂ ಇಡುತ್ತಿದೆ ಎಂದು ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಚುನಾವಣೆ ಬರಲಿ, ಜನ ಯಾರ ಕಿವಿ ಮೇಲೆ ಹೂ ಇಡುತ್ತಾರೆ ಎಂಬುದು ಗೊತ್ತಾಗಲಿದೆ" ಎಂದು ತಿರುಗೇಟು ನೀಡಿದರು.
"ಮೋದಿಯವರ ಸರ್ಕಾರದ ಕಾರ್ಯಕ್ರಮಗಳನ್ನು ಸ್ಥಳೀಯ ಶಾಸಕ ರಾಮದಾಸ್ ಕ್ಷೇತ್ರದಲ್ಲಿ ಜಾರಿ ಮಾಡುವುದರಲ್ಲಿ ಮುಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಮ್ಮೆಲ್ಲರ ಆಶೀರ್ವಾದ ರಾಮದಾಸ್ ಮೇಲಿರಲಿ" ಎಂದು ಇದೇ ವೇಳೆ ಪ್ರತಾಪ್ ಸಿಂಹ ಮನವಿ ಮಾಡಿದರು.
ಡಿ.ರೂಪಾ vs ಸಿಂಧೂರಿ: ಉನ್ನತ ಸ್ಥಾನದಲ್ಲಿರುವ ಇಬ್ಬರು ಮಹಿಳಾ ಅಧಿಕಾರಿಗಳು ರಾಜ್ಯ ಸರ್ಕಾರದ ಸೇವಾ ನಿಯಮಗಳ ಚೌಕಟ್ಟನ್ನು ಮೀರಿ ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಉನ್ನತ ಅಧಿಕಾರಿಗಳಾದ ಐಪಿಎಸ್ ಡಿ.ರೂಪಾ ಮತ್ತು ಐಎಎಸ್ ರೋಹಿಣಿ ಸಿಂಧೂರಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಮುಖ್ಯ ಕಾರ್ಯದರ್ಶಿಗೆ ಐಪಿಎಸ್ ಅಧಿಕಾರಿ ಡಿ ರೂಪಾ ಪ್ರತಿ ದೂರು
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ರಾಜ್ಯ ಧಾರ್ಮಿಕ ಮತ್ತು ದತ್ತಿ ನಿಧಿ ಇಲಾಖೆಯ ಆಯುಕ್ತೆಯಾಗಿದ್ದಾರೆ. ಡಿ.ರೂಪಾ ಐಜಿಪಿ ದರ್ಜೆ ಅಧಿಕಾರಿಯಾಗಿದ್ದು ರಾಜ್ಯ ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ : ಅವರು ಬೇಗ ಗುಣಮುಖರಾಗಲಿ, ವೈಯಕ್ತಿಕ ತೇಜೋವಧೆ ಸರಿಯಲ್ಲ: ರೋಹಿಣಿ ಸಿಂಧೂರಿ