ಮೈಸೂರು : ನಾಲೆಯೊಳಗೆ ಬಿದ್ದು ನೀರಿನಲ್ಲಿ ಸಾವು-ಬದುಕಿನ ನಡುವೆ ಒದ್ದಾಡುತ್ತಿದ್ದ ಜಿಂಕೆಯನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ರಕ್ಷಣೆ ಮಾಡಿರುವ ಘಟನೆ ನಂಜನಗೂಡಿನ ಕಿರುಗುಂದ ಗ್ರಾಮದಲ್ಲಿ ನಡೆದಿದೆ. ಕಾಡಿನಿಂದ ದಾರಿತಪ್ಪಿ ನಾಡಿಗೆ ಬಂದಿದ್ದ ಜಿಂಕೆ ನಾಲೆ ನೀರಿಗೆ ಬಿದ್ದಿದೆ. ನೀರಿನಿಂದ ಮೇಲೆ ಬರಲಾಗದೆ ಪರದಾಡುತ್ತಿತ್ತು. ಇದನ್ನು ನೋಡಿದ ಬಿಳಿಗೆರೆ ಪೊಲೀಸ್ ಠಾಣೆಯ ಪಿಎಸ್ಐ ಕರಿಬಸಪ್ಪ ರಕ್ಷಣೆ ಮಾಡಿದರು.
ನಾಲೆಯಲ್ಲಿ ನೀರು ಕುಡಿಯುತ್ತಿದ್ದಾಗ ನಾಯಿಗಳು ಅಟ್ಟಾಡಿಸಿಕೊಂಡು ಬಂದಿದ್ದು, ತಪ್ಪಿಸಿಕೊಳ್ಳುವ ಆತುರದಲ್ಲಿ ಜಿಂಕೆ ನಾಲೆಗೆ ಬಿದ್ದಿದೆ. ನೀರಿನಲ್ಲಿ ತೇಲಿಕೊಂಡು ಬರುತ್ತಿರುವುದನ್ನು ಕಂಡ ಕರಿಬಸಪ್ಪ, ಸುರಕ್ಷಿತವಾಗಿ ಗ್ರಾಮದ ಯುವಕರ ಸಹಾಯದೊಂದಿಗೆ ರಕ್ಷಣೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಜಿಂಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ಜಿಂಕೆಯ ಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದೆ. ಪೊಲೀಸ್ ಸಿಬ್ಬಂದಿ ನಾಗೇಂದ್ರ, ಮಹೇಶ್ ಸಾಥ್ ನೀಡಿದ್ದರು.
ಬೋನಿಗೆ ಬಿದ್ದ ಚಿರತೆ: ಮೈಸೂರು ತಾಲೂಕಿನ ಹುಯಿಲಾಳು ಗ್ರಾಮದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಎರಡೂವರೆ ವರ್ಷದ ಹೆಣ್ಣು ಚಿರತೆ ಹಲವು ದಿನಗಳಿಂದ ಗ್ರಾಮದಲ್ಲಿ ಉಪಟಳ ನೀಡುತ್ತಿತ್ತು. ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಮೂರು ದಿನಗಳ ಹಿಂದೆ ಗ್ರಾಮದ ಖಾಸಗಿ ಫಾರ್ಮೌಸ್ನಲ್ಲಿ ಇರಿಸಲಾಗಿದ್ದ ಬೋನಿಗೆ ಭಾನುವಾರ ಚಿರತೆ ಬಂಧಿಯಾಗಿದೆ.
ಕಾರ್ಖಾನೆ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ವಿಐಎಸ್ಎಲ್ ಕಾರ್ಖಾನೆ ಆವರಣದಲ್ಲಿ ಇಟ್ಟಿದ್ದ ಬೋನಿನೊಳಗೆ (ಸೆಪ್ಟೆಂಬರ್- 27-2023) ಬೆಳಗ್ಗೆ ಚಿರತೆ ಬಿದ್ದಿತ್ತು. ಕಳೆದ ಜುಲೈನಲ್ಲಿ ಕಾರ್ಖಾನೆಯ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಕಾರ್ಖಾನೆಯವರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರು. ಬಳಿಕ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಬೋನ್ ಇರಿಸಿದ್ದರು.
ಇದನ್ನೂ ಓದಿ: ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಕಾರ್ಮಿಕರು