ಮೈಸೂರು: ಈ ಬಾರಿಯ ಸರಳ ದಸರಾ ಮಹೋತ್ಸವದಲ್ಲಿ ಅರಮನೆ ಮುಂಭಾಗ ಕಾರ್ಯಕ್ರಮ ನೀಡಲು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮೈಸೂರು ನಗರ ಮತ್ತು ಜಿಲ್ಲಾ ಸಾಂಸ್ಕೃತಿಕ ವೃತ್ತಿ ಕಲಾವಿದರ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕೊರೊನಾ ಲಾಕ್ಡೌನ್ನಿಂದ 7 ತಿಂಗಳಿನಿಂದ ವೃತ್ತಿ ಕಲಾವಿದರು ಸಾಕಷ್ಟು ಕಷ್ಟ ಪಡುತ್ತಿದ್ದು, ಅರಮನೆ ಮುಂದೆ ಹಾಗೂ ವಿವಿಧ ಸಭಾಂಗಣಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂಜಾಗ್ರತೆಯೊಂದಿಗೆ ನಡೆಸಲು ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಕಲಾವಿದರು ಒತ್ತಾಯಿಸಿದರು.
ನಿರ್ಲಕ್ಷ್ಯಿತ, ಅಶಕ್ತ ಕಲಾವಿದರ ಹಿತಾಸಕ್ತಿಗಾಗಿ ರಾಜ್ಯ ಮಟ್ಟದ ಕಲಾವಿದರ ಪ್ರಾಧಿಕಾರ ರಚನೆ ಮಾಡಿ, ವೃತ್ತಿ ಕಲಾವಿದರು ಮತ್ತು ಅವರ ಕುಟುಂಬದವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕು ಎಂದು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿ ಕಲಾವಿದರ ಕಷ್ಟಗಳಿಗೆ ಸ್ಪಂದಿಸಬೇಕು. ನೈಜ ಕಲಾವಿದರಿಗೆ ಅವಕಾಶ ಒದಗಿಸಿಕೊಡಬೇಕು. ಹಿರಿಯ ಹಾಗೂ ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು 5 ಸಾವಿರ ಹೆಚ್ಚಳ ಮಾಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.