ಮೈಸೂರು: ಇಂದು ರಾಜಭವನದಲ್ಲಿ 24 ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆದಿದೆ. ಇನ್ನೊಂದೆಡೆ, ತನ್ವೀರ್ ಸೇಠ್ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಗಾಂಧಿವೃತ್ತದ ಬಳಿ ಎನ್ ಆರ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಎನ್‍ಆರ್ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಮತ್ತು ತನ್ವೀರ್ ಸೇಠ್ ಅಭಿಮಾನಿ ಬಳಗದ ಅಧ್ಯಕ್ಷ ಎಂ.ರಸೂಲ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರಲು ನಿರ್ಣಾಯಕ ಪಾತ್ರ ವಹಿಸಿರುವ ಮುಸ್ಲಿಂ ಸಮುದಾಯವನ್ನು ಸಂಪುಟದಲ್ಲಿ ಕಡೆಗಣಿಸಲಾಗುತ್ತಿದೆ. ಸತತವಾಗಿ 6 ಬಾರಿ ಜಯಗಳಿಸಿರುವ ತನ್ವೀರ್ ಸೇಠ್ ಅವರಿಗೆ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡುವಂತೆ ಆಗ್ರಹಿಸಿದರು.
ಪ್ರಾಮಾಣಿಕ, ನಿಷ್ಕಳಂಕ ರಾಜಕಾರಣಿ, ಅಭಿವೃದ್ಧಿಯ ಹರಿಕಾರರಾದ ತನ್ವೀರ್ ಸೇಠ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಮಂತ್ರಿ ಸ್ಥಾನ ನೀಡಬೇಕು. ಮಾಜಿ ಸಚಿವರಾದ ಅಜೀಜ್ ಸೇಠ್ ನಿಧನರಾದ ಬಳಿಕ ತೆರವಾದ ಮೈಸೂರು ನರಸಿಂಹರಾಜ ಕ್ಷೇತ್ರದಲ್ಲಿ ನಡೆದ 2002ರ ಉಪ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ತನ್ವೀರ್ ಸೇಠ್ ತಮ್ಮ ಪ್ರಥಮ ಜಯ ದಾಖಲಿಸಿದರು. ಬಳಿಕ, ಇಂದಿನವರೆಗೂ ಸತತವಾಗಿ ಎನ್‍ಆರ್ ಕ್ಷೇತ್ರದಲ್ಲಿ ಜಯಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ ಸಚಿವರಾಗಿ ಹಾಗೂ ಮೈಸೂರು, ಕೊಡಗು ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ತಮ್ಮ ಎನ್‍ಆರ್ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ರಾಜಕೀಯ ಹಿರಿತನವನ್ನು ಪರಿಗಣಿಸಿ ಇವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ : ಮೈಸೂರು ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿ ಸ್ಥಾನ : ಆಕಾಂಕ್ಷಿಗಳು ಯಾರ್ಯಾರು ?
ತನ್ವೀರ್ ಸೇಠ್ ಅವರು ರಾಜ್ಯದ ಹಿರಿಯ ಮುಸ್ಲಿಂ ಮುಖಂಡರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ತನ್ವೀರ್ ಸೇಠ್ ರಾಜ್ಯದಲ್ಲಿ ಮತ್ತು ವಿಶೇಷವಾಗಿ ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಶೇಕಡಾ 100 ರಷ್ಟು ಮುಸ್ಲಿಂ ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಕಾಂಗ್ರೆಸ್ ಪಕ್ಷದ ಕಟ್ಟಾಳು, ಜನನಾಯಕನಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಅಗತ್ಯವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ರಾಜ್ಯದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತೊಮ್ಮೆ ಪರಾಮರ್ಶಿಸಿ, ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಇನ್ನು ಮೈಸೂರು ಭಾಗದ ಮುಸ್ಲಿಂ ಸಮುದಾಯಕ್ಕೆ ಸಿದ್ದರಾಮಯ್ಯ ಮತ್ತು ತನ್ವೀರ್ ಸೇಠ್ ಅವರು ಎರಡು ಕಣ್ಣುಗಳಿಂದ್ದಂತೆ, ತನ್ವೀರ್ ಸೇಠ್ ವಿರುದ್ಧ ಯಾವುದೇ ರೀತಿಯ ವೈಮನಸ್ಸು ಇಟ್ಟುಕೊಳ್ಳದೇ ಅವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಅಂತಾ ಹೇಳಿದರು.