ಮೈಸೂರು: ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರದಲ್ಲಿ ಮಧ್ಯರಾತ್ರಿಯಿಂದ ನಾಳೆ ಬೆಳಗ್ಗೆ6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾ ಪ್ರತಿಮೆ ಸುತ್ತ ಹಾಗೂ ನಾಲ್ಕು ಕಡೆ ಚಾಮುಂಡಿ ಬೆಟ್ಟದ ದ್ವಾರಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಈ ನಿಷೇಧಾಜ್ಞೆ ಕೇವಲ ಮಹಿಷಾ ದಸರಾ ಹಾಗೂ ಚಾಮುಂಡಿ ಚಲೋ ಕಾರ್ಯಕ್ರಮಕ್ಕೆ ಮಾತ್ರ ಅನ್ವಯವಾಗಲಿದೆ ಎಂದು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ.
ಮಹಿಷಾ ದಸರಾ ಸಮಿತಿಯಿಂದ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಿನಾಚರಣೆ ಆಚರಣೆ ಹಾಗೂ ಮೈಸೂರು ನಗರ ಬಿಜೆಪಿ ವತಿಯಿಂದ ಚಾಮುಂಡಿ ಚಲೋ ಜಾಥದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಕಚೇರಿಗೆ ಅನುಮತಿಗಾಗಿ ಪತ್ರ ಸಲ್ಲಿಸಿದ್ದಾರೆ. ಆದರೆ ಈ ಕಾರ್ಯಕ್ರಮಗಳ ಆಚರಣೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ, ಅಕ್ಟೋಬರ್ 12 ರ ಮಧ್ಯರಾತ್ರಿಯಿಂದ ಅಕ್ಟೋಬರ್ 14ರ ಬೆಳಗ್ಗೆ 6 ಗಂಟೆಯವರೆಗೆ ಸಿಆರ್ಪಿಸಿ ಕಲಂ 144ರ ಅಡಿ ನಿಷೇಧಾಜ್ಞೆ ಹೇರಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಇದರನ್ವಯ ಕಳೆದ ಮಧ್ಯರಾತ್ರಿಯಿಂದಲೇ ಚಾಮುಂಡಿ ಬೆಟ್ಟ ಸೇರಿದಂತೆ, ಚಾಮುಂಡಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ದ್ವಾರಗಳಲ್ಲಿ ಬಿಗಿಯಾದ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಜೊತೆಗೆ ಮೈಸೂರು ನಗರದಲ್ಲಿ ಪ್ರತಿಭಟನೆ, ಬೈಕ್ ರ‍್ಯಾಲಿ, ಜಾಥಾ, ಪರ ವಿರೋಧ ಘೋಷಣೆಗಳು, ಸಂಭ್ರಮಾಚರಣೆ, ಫ್ಲೆಕ್ಸ್ಗಳನ್ನು ಹಾಕುವುದಕ್ಕೆ ನಿಷೇಧ ಹೇರಲಾಗಿದೆ.
ಪುರಭವನದಲ್ಲಿ ಮಾತ್ರ ಅನುಮತಿ: ಪುರಭವನದಲ್ಲಿ ಮಹಿಷಾ ಉತ್ಸವ ವೇದಿಕೆಗೆ ಪುರಭವನದ ಆವರಣದಲ್ಲಿ ಮಹಿಷಾ ಉತ್ಸವದ ವೇದಿಕೆಯಲ್ಲಿ ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಧರ್ಮಧೀಕ್ಷೆ ಹಾಗೂ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮಾತ್ರ ಅನುಮತಿ ನೀಡಲಾಗಿದೆ. ಯಾವುದೇ ಸಭೆ ಸಮಾರಂಭಗಳನ್ನು ಮಾಡಲು ಅನುಮತಿ ನೀಡಲಾಗಿಲ್ಲ ಎಂದು ನಗರ ಪೋಲಿಸ್ ಕಮಿಷನರ್ ರಮೇಶ್ ಬಾನೋತ್ ಮಾಹಿತಿ ನೀಡಿದ್ದಾರೆ. ಈ ಮಹಿಷಾ ಉತ್ಸವ ವೇದಿಕೆಯು, ಮಹಿಷಾ ದಸರಾ ಸಮಿತಿಯು ಹೆಸರನ್ನು ಬದಲಾವಣೆ ಮಾಡಿಕೊಂಡು ಅನುಮತಿ ಕೇಳಿತ್ತು. ಅದರಂತೆ ಪುರಭವನದಲ್ಲಿ ಮಹಿಷಾನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗುವುದು. ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ಶಾಂತ ರೀತಿಯಲ್ಲಿ ಸಮಾರಂಭ ನಡೆಸಲಾಗುವುದು ಎಂದು ಮಹಿಷಾ ದಸರಾ ಅಧ್ಯಕ್ಷ, ಮಾಜಿ ಮೇಯರ್ ಪುರುಷೋತ್ತಮ್ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಪ್ರತಾಪ್ ಸಿಂಹ ಹೇಳಿದ್ದೇನು: ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚಾಮುಂಡೇಶ್ವರಿ ತಾಯಿಗೆ ನಿಂದನೆ ಮಾಡಬಾರದು ಎಂಬ ಉದ್ದೇಶದಿಂದ ಮಾತ್ರ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಳ್ಳಲಾಗಿದ್ದು. ಆದರೆ, ಚಾಮುಂಡಿ ಬೆಟ್ಟದಲ್ಲಿ ಇರುವ ಮಹಿಷಾ ಪ್ರತಿಮೆಗೆ ಮಾಲಾರ್ಪಣೆ ಮಾಡಲು ನಗರ ಪೋಲಿಸ್ ಕಮಿಷನರ್ ಅನುಮತಿ ನಿರಾಕರಿಸಿದ್ದು ಸರಿಯಿದೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟ ಚಲೋ ಕೈ ಬಿಡಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ದಸರಾ ಉದ್ಘಾಟನೆ ಕಾರ್ಯಕ್ರಮ ನಡೆಯುವುದರಿಂದ ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ ಮಾಡಿರುವುದು ಸರಿ ಇದೆ. ಇದನ್ನು ಸ್ವಾಗತಿಸುತ್ತೇವೆ. ಇದೇ ಸಂದರ್ಭದಲ್ಲಿ ಮಹಿಷಾ ದಸರಾ ಸಮಿತಿ ತನ್ನ ಹೆಸರನ್ನು ಮಹಿಷಾ ಉತ್ಸವ ವೇದಿಕೆಯೆಂದು ಬದಲಾಯಿಸಿಕೊಂಡು ಅನುಮತಿ ಪಡೆದು, ಪುರಭವನದಲ್ಲಿ ಮಹಿಷಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿರುವುದರ ಬಗ್ಗೆ ನನ್ನದೇನು ತಕರಾರಿಲ್ಲ. ನಮ್ಮ ಆಶಯ ಚಾಮುಂಡಿ ಬೆಟ್ಟದಲ್ಲಿ ಇರುವ ಮಹಿಷಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಚಾಮುಂಡಿ ಬೆಟ್ಟದಲ್ಲಿ ಅನಾಚಾರ ಆಗದಂತೆ ತಡೆದಿದ್ದೇವೆ. ಆ ಮೂಲಕ ನಮ್ಮ ಆಶಯ ಈಡೇರಿದೆ ಎಂದು ಸಂಸದ ಪ್ರತಾಪ್ ಸಿಂಹ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಅ.15ಕ್ಕೆ ದಸರಾ ಮಹೋತ್ಸವ ಉದ್ಘಾಟನೆ: ಏಕಮುಖ ಸಂಚಾರ, ನಿರ್ಬಂಧಿಸಿರುವ ರಸ್ತೆಗಳ ಮಾಹಿತಿ ಇಂತಿದೆ