ಮೈಸೂರು: ನಟ ದರ್ಶನ್ ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಹೋಟೆಲ್ ಮಾಲೀಕ ಸಂದೇಶ್, ಹೋಟೆಲ್ನಲ್ಲಿ ಅಂದು ರಾತ್ರಿ ಸಣ್ಣ ಗಲಾಟೆಯಾಗಿದ್ದು ನಿಜ. ಆದರೆ ಹಲ್ಲೆ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮಗ ಸಂದೇಶ್ ಅಂದಿನ ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ್ದು ಹೀಗೆ..
''ಈ ಘಟನೆ ಲಾಕ್ಡೌನ್ಗಿಂತ 4 ದಿನ ಮುಂಚೆ ನಡೆದದ್ದು. ಘಟನೆಯಿಂದ ನಮಗೂ, ನಮ್ಮ ಹೋಟೆಲ್ಗೂ ತೊಂದರೆಯಾಗಿದೆ. ನಮ್ಮ ಹೋಟೆಲ್ನ ಮಹಾರಾಷ್ಟ್ರ ಮೂಲದ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಹೀಗಾಗಿ ರಾತ್ರಿ ವೇಳೆ ದರ್ಶನ್ ರೂಮ್ಗೆ ಸರ್ವೀಸ್ ಮಾಡಲು ಹೋದ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡಿದ್ದ. ಆಗ ದರ್ಶನ್ ಟೆನ್ಷನ್ನಲ್ಲಿದ್ದ ಕಾರಣ, ದರ್ಶನ್ ಸಿಬ್ಬಂದಿಯ ಮೇಲೆ ಕನ್ನಡದಲ್ಲಿ ಕೂಗಾಡಿ ಗಲಾಟೆ ಮಾಡಿದ್ದರು, ಆದರೆ ಹಲ್ಲೆ ಮಾಡಿಲ್ಲ'' ಎಂದು ಹೋಟೆಲ್ ಮಾಲೀಕ ಸಂದೇಶ್ ಹೇಳಿದ್ದಾರೆ.
ಗಲಾಟೆ ಮಧ್ಯರಾತ್ರಿ ನಡೆದಿದೆ. ಅಂದು ಆ ರೂಮ್ನಲ್ಲಿ ದರ್ಶನ್ , ರಾಕೇಶ್ ಪಾಪಣ್ಣ , ಹರ್ಷ ಮೆಲೆಂಟಾ, ಪವಿತ್ರ ಗೌಡ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನ ಇದ್ದರು. ಗಲಾಟೆಯಾದ ಮೇಲೆ ನಾನೆ ಸಿಬ್ಬಂದಿಯನ್ನು ಸಮಾಧಾನ ಮಾಡಿ ದರ್ಶನ್ಗೂ ಬೈದಿದ್ದೆ. ಅಂದು ಸಣ್ಣಪುಟ್ಟ ಗಲಾಟೆ ನಡೆದಿದ್ದು ನಿಜ. ಆದರೆ ಸಿಬ್ಬಂದಿ ಮೇಲೆ ಹಲ್ಲೆಯಾಗಿಲ್ಲ . ಹಲ್ಲೆಯಾಗಿದ್ದರೆ ನಾನೇ ಪೊಲೀಸರಿಗೆ ದೂರು ನೀಡುತ್ತಿದ್ದೆ, ಆ ರೀತಿಯ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಸಿಟಿವಿ ಫೂಟೇಜ್ ನಾಶ ಮಾಡಿಲ್ಲ:
ನನ್ನ ಹೋಟೆಲ್ನಲ್ಲಿರುವ ಸಿಸಿಟಿವಿ ಫೂಟೇಜ್ ಅನ್ನು ನಾಶ ಮಾಡಿಲ್ಲ. 10 ದಿನಗಳವರೆಗೆ ಫೂಟೇಜ್ ಇರುತ್ತದೆ. ಆ ನಂತರ ಅದು ಆಟೋ ಡಿಲೀಟ್ ಆಗುತ್ತದೆ ಎಂದರು. ಈ ವಿಚಾರವನ್ನು ನನಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಫೋನ್ ಮಾಡಿ ಕೇಳಿದರು. ಅದಕ್ಕೆ ನಾನು ಸಣ್ಣ ವಿಚಾರ ಇಲ್ಲಿಗೆ ಬಿಟ್ಟುಬಿಡಿ ಎಂದು ಅವರಿಗೆ ಹೇಳಿದ್ದೆ. ಯಾರ ಮೇಲೂ ಹಲ್ಲೆ ಆಗಿಲ್ಲ, ಪೊಲೀಸರಿಗೆ ದೂರು ನೀಡುವಷ್ಟು ದೊಡ್ಡ ಪ್ರಕರಣ ಅಲ್ಲವೆಂದು ಎಂದು ಎಂದು ಘಟನೆ ಬಗ್ಗೆ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಸಂಪೂರ್ಣವಾಗಿ ವಿವರಿಸಿದರು. ಹಾಗೂ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು.