ಮೈಸೂರು: ನವರಾತ್ರಿಯಲ್ಲಿ ಶಕ್ತಿ ದೇವತೆ ಆರಾಧನೆ ಮಾಡುವುದರಿಂದ ವಿಶೇಷ ಫಲಗಳು ಲಭಿಸುತ್ತವೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿ ಶೇಖರ್ ದೀಕ್ಷಿತ್ ತಿಳಿಸಿದ್ದಾರೆ.
ನವರಾತ್ರಿಯ 9 ದಿನ ಮೂಲ ಚಾಮುಂಡಿ ತಾಯಿಯ 10 ವಿಶಿಷ್ಟ ಅಲಂಕಾರಗಳು ಹಾಗೂ ನವರಾತ್ರಿ ಸಂದರ್ಭದಲ್ಲಿ ಶಕ್ತಿ ದೇವತೆಯನ್ನು ಪೂಜೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ' ಈ ಟಿವಿ' ಜೊತೆ ಮಾತನಾಡಿದ್ದಾರೆ. ಅದರ ವಿಶೇಷ ಸಂದರ್ಶನ ಇಲ್ಲಿದೆ.
ನಾಳೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಹೇಗೆ ನಡೆಯಲಿದೆ ?
ನಾಳೆ ಚಾಮುಂಡೇಶ್ವರಿ ತಾಯಿಯ ಪುಷ್ಪಾರ್ಚನೆ ಮೂರ್ತಿಗೆ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮಾಡಿ ಬ್ರಾಹ್ಮಿ ಅಲಂಕಾರ ಮಾಡಲಾಗುವುದು. ನಂತರ ಬೆಳ್ಳಿ ರಥದಲ್ಲಿ ಕೂರಿಸಿ ವೇದಿಕೆಯ ಮೇಲೆ ಪುಷ್ಪಾರ್ಚನೆಗೆ ಇರಿಸಲಾಗುವುದು.
ನಂತರ ಅತಿಥಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುವುದು. ನಂತರ 8.15 ರಿಂದ 8.45 ರೊಳಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಅತಿಥಿಗಳಿಂದ ಪುಷ್ಪಾರ್ಚನೆ ಹಾಗೂ ದೀಪ ಬೆಳಗುವ ಮೂಲಕ ದಸರಾಗೆ ಚಾಲನೆ ನೀಡಲಾಗುವುದು ಎಂದರು.
ಶಕ್ತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ನವರಾತ್ರಿಯನ್ನು ಶಕ್ತಿ ದೇವಸ್ಥಾನಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುವುದು. ಏಳು ದಿನ ಏಳು ಅಲಂಕಾರ ಮಾಡಲಾಗುವುದು. 9 ನೇ ದಿನ ಚಂಡಿ ಹೋಮ ಮಾಡಲಾಗುವುದು. 10 ನೇ ದಿನ ವಿಜಯ ದಶಮಿ ಯಾತ್ರೆ ಹೊರಡಿಸುವುದು ಪ್ರತಿ ವರ್ಷದ ಪದ್ದತಿಯಾಗಿದೆ ಎಂದು ಅವರು ತಿಳಿಸಿದರು.
ವರ್ಷ ಪೂರ್ತಿ ನಾವು ಪೂಜೆ ಮಾಡಲು ಸಾಧ್ಯವಾಗದೇ ಇದ್ದಾಗ ಶರತ್ಕಾಲದ ಈ 9 ದಿನಗಳಲ್ಲಿ ಶಕ್ತಿ ದೇವತೆಗಳ ಆರಾಧನೆ ಮಾಡಲಾಗುವುದು. ಸ್ಕಂದ ಪುರಾಣದಲ್ಲಿ ಮಹಿಷಾಸುರನ ಸಂಹಾರ ಮಾಡುವ ಸನ್ನಿವೇಶಗಳು ಬರುತ್ತವೆ. ಮನೆಗಳಲ್ಲಿ ಗೊಂಬೆ ಕೂರಿಸುವುದು. ಮಕ್ಕಳ ಕೈಯಲ್ಲಿ ದೀಪ ಹಚ್ಚಿಸುವುದು ನವರಾತ್ರಿಯ ವಿಶೇಷ.
ಶರತ್ಕಾಲದಲ್ಲಿ ಪೂಜೆ ಮಾಡಿದಾಗ ವಿಶೇಷ ಶಕ್ತಿ ಬರುತ್ತದೆ. ಅಲ್ಲದೇ, ಅನೇಕ ರೋಗ ರುಜಿನಗಳು ಹೋಗಲಿ, ಹಿಂದೆ ಇದ್ದ ಹಾಗೇ ಆಗಲಿ ಎಂದು ಪ್ರಾರ್ಥಿಸಲಾಗುವುದು ಎಂದು ತಿಳಿಸಿದರು.
ಓದಿ: ಸಿಲಿಂಡರ್ ಬೆಲೆ ಏರಿಕೆಗೆ ಆಕ್ರೋಶ: ಆರ್‌ಎಸ್‌ಎಸ್ ಈ ಬಗ್ಗೆ ದನಿ ಎತ್ತಬೇಕೆಂದ ಹೆಚ್ಡಿಕೆ