ಮೈಸೂರು: ಹತ್ತು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಗರ್ಭಿಣಿ ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ತೀವ್ರವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಹುಣಸೂರು ಪಟ್ಟಣದ ಕಲ್ಕುಣಿಕೆ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮಿ (23) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮಂಚಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ಅವರನ್ನು 10 ತಿಂಗಳ ಹಿಂದೆ ಹುಣಸೂರಿನ ಯೋಗೇಶ್ ಜೊತೆ ಅದ್ಧೂರಿಯಾಗಿ ಮದುವೆ ಮಾಡಿ ಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ 50 ಲಕ್ಷ ರೂ. ವರದಕ್ಷಿಣೆ, 400 ಗ್ರಾಂ ಚಿನ್ನ ನೀಡಲಾಗಿತ್ತಂತೆ. ಜೊತೆಗೆ ಒಂದು ನಿವೇಶನವನ್ನೂ ನೀಡಲು ಒಪ್ಪಿಕೊಂಡಿದ್ದ ಪೋಷಕರಿಗೆ ಬಳಿಕ ನಿವೇಶನ ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಲಕ್ಷ್ಮಿಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತು ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ದೂರಿದ್ದಾರೆ.
ಈ ಕುರಿತಂತೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯೋಗೇಶ್ ಹಾಗೂ ಕುಟುಂಬಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.