ಮೈಸೂರು : ಗೌಡ ಲಿಂಗಾಯತ, ಮಲೆಗೌಡ ಹಾಗೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಒತ್ತಾಯಿಸಿ ಆ.26ರಿಂದ ಪ್ರತಿಜ್ಞಾ ಪಂಚಾಯತ್ ಘೋಷವಾಕ್ಯದೊಂದಿಗೆ ರಾಜ್ಯಾದ್ಯಂತ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ಹೇಳಿದರು.
ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀಗಳು, ಪಂಚಮಸಾಲಿ ಲಿಂಗಾಯತರಿಗೆ 2ಎ ಮೀಸಲಾತಿ ಬೇಕೆಂದು ದೊಡ್ಡ ಚಳವಳಿಯನ್ನು ಮಾಡಿದ್ದೆವು. ಇದಕ್ಕೆ ಸರ್ಕಾರ 6 ತಿಂಗಳ ಕಾಲಾವಕಾಶ ಕೇಳಿತ್ತು. ಈ ಕಾಲಾವಕಾಶ ಸೆ.30ಕ್ಕೆ ಮುಗಿಯಲಿದೆ ಎಂದರು.
ಆ.26ರಿಂದ ಅಭಿಯಾನ : ಈ ಹಿನ್ನೆಲೆಯಲ್ಲಿ ಇತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಗೌಡ ಲಿಂಗಾಯತರಿಗೆ 2ಎ ಮೀಸಲಾತಿ ಪಡೆಯಬೇಕೆಂಬ ಉದ್ದೇಶದಿಂದ ಆ. 26 ರಿಂದ ಸೆ.30ರವರೆಗೆ ರಾಜ್ಯಾದ್ಯಂತ ಗೌಡ ಲಿಂಗಾಯತ, ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ದಿನ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಮಲೆ ಮಹದೇಶ್ವರ ಬೆಟ್ಟದಿಂದ ಆರಂಭವಾಗಲಿದ್ದು, ಎಂಟು ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು.
ಸಿಎಂಗೆ ಪಂಚಮಸಾಲಿಗಳ ಸ್ಥಿತಿಗತಿ ಗೊತ್ತಿದೆ : ಉತ್ತರ ಕರ್ನಾಟಕದವರಾದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮುದಾಯದ ಸ್ಥಿತಿಗತಿ ಗೊತ್ತಿದೆ. ಅವರು ಮೂರು ಬಾರಿ ಶಾಸಕರಾಗಲು ಪಂಚಮಸಾಲಿ ಜನಾಂಗದ ಕೊಡುಗೆ ಏನು ಎಂದು ಗೊತ್ತಿದೆ. ಸಿಎಂ ಆದ ಬಳಿಕ ನನ್ನನ್ನು ಭೇಟಿಯಾಗಿದ್ದರು. ಆಗ ಈ ಬಗ್ಗೆ ತಿಳಿಸಿದ್ದೇನೆ ಎಂದು ಶ್ರೀಗಳು ಹೇಳಿದರು.
ಮುಖ್ಯಮಂತ್ರಿ ಚಂದ್ರು ಹೇಳಿಕೆಗೆ ಪ್ರತಿಕ್ರಿಯೆ : ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಚಂದ್ರು ಅವರ ಹೇಳಿಕೆ ಸರಿಯಲ್ಲ. ಈ ಸಮುದಾಯದವರು ಶೇ.95ರಷ್ಟು ಜನ ಬಡ, ಕೃಷಿ ಕಾರ್ಮಿಕರಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ತಿಳಿದುಕೊಂಡು ಮಾತನಾಡಬೇಕು. ಇಂತಹ ಹೇಳಿಕೆ ಕೊಡುವುದು ನಿಮಗೆ ಶೋಭೆ ತರುವುದಿಲ್ಲ. ನಾವು ಸಂವಿಧಾನ ಬದ್ಧ ಹಕ್ಕನ್ನು ಕೇಳುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಶ್ರೀಗಳು ಮುಖ್ಯಮಂತ್ರಿ ಚಂದ್ರು ಹೇಳಿಕೆ ಖಂಡಿಸಿದರು.
ಓದಿ: ರಾಜ್ಯದಲ್ಲಿ ಶೀಘ್ರವೇ ಹೊಸ ಡಿಜಿಟಲ್ ನೀತಿ ಅನುಷ್ಠಾನ : ಸಿಎಂ ಬೊಮ್ಮಾಯಿ