ಮೈಸೂರು: ಸೂಪರ್ ಮಾರ್ಕೆಟ್ ವ್ಯವಸ್ಥೆಯನ್ನು ನಾಡಿಗೆ ಪರಿಚಯಿಸಿದ್ದು ಯಾರು ಎಂಬುದರ ಬಗ್ಗೆ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸುತ್ತಿರುವ ಪ್ರತಿಪಕ್ಷಗಳು ಮನನ ಮಾಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ ಮಾಡುತ್ತೇವೆ. ಬಂದ್ ಮಾಡುವವರು ಬಂದ್ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ. ದಲ್ಲಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ.? ದಲ್ಲಾಳಿಗೆ ಲಾಭ ಹೆಚ್ಚಿಸುವಂತಿದ್ದ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ? ಎಂದು ಪ್ರಶ್ನಿಸಿದರು.
ಎಪಿಎಂಸಿ ಚುನಾವಣೆ ಲಕ್ಷಾಂತರ ಖರ್ಚು ಮಾಡಿ ಏಕೆ ನಡೆಸುತ್ತಾರೆ? ಲಾಭವಿಲ್ಲದೆ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ? ರೈತರಿಂದಲೇ ಸೆಸ್ ಸುಲಿಗೆ ಮಾಡಿ ಲಾಭ ಮಾಡ್ತಿರೋದು ದಲ್ಲಾಳಿಗಳು. ಈ ಬಂದ್ನಲ್ಲಿ ರೈತರು ಭಾಗಿಯಾಗ್ತಿಲ್ಲ. ಆದ್ರೆ, ರೈತರ ಹೆಸರಿನ ಸಂಘಟನೆಗಳು ಭಾಗಿಯಾಗ್ತಿವೆ. ಈ ಬಂದ್‍ನಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕರ್ನಾಟಕ್ಕ ಸಿಕ್ಕ ಅತಿದೊಡ್ಡ ಮನ್ನಣೆಯಾಗಿದೆ. ಬಿಜೆಪಿ ಕರ್ನಾಟಕದ ವಿಚಾರದಲ್ಲಿ ಹೆಚ್ಚು ಪ್ರೀತಿ ಹೊಂದಿದೆ. ಅದಕ್ಕಾಗಿ ರಾಷ್ಟ್ರೀಯ ಸಂಘಟನೆಯಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ ಎಂದು ಇದೇ ವೇಳೆ ತಿಳಿಸಿದರು.