ಮೈಸೂರು: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ರಾಜಕೀಯಕ್ಕಾಗಿ ಉಪವಾಸ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಹೆಚ್ಚು ಚರ್ಚೆ ಬೇಡ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ರಾಜ್ಯ ಸರ್ಕಾರದ ಮೇಕೆದಾಟು ಯೋಜನೆಯನ್ನು ವಿರೋಧಿಸಿ ಆ.5 ಕ್ಕೆ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದ ಅಣ್ಣಾಮಲೈ ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಕೆ ಮಾಡಲು ಹೇಳಿದೆ. ತಮಿಳುನಾಡಿನಲ್ಲಿ ಅಣ್ಣಾಮಲೈ ಅಲ್ಲಿನ ರಾಜಕೀಯಕ್ಕಾಗಿ ಅವರು ಉಪವಾಸ ಮಾಡುತ್ತಿದ್ದಾರೆ. ಅದನ್ನು ನಾವು ಬೇಡ ಅಂತ ಹೇಳಲು ಆಗೋವುದಿಲ್ಲ. ಆದರೆ ಈ ಬಗ್ಗೆ ನಮ್ಮಲ್ಲಿ ಹೆಚ್ಚು ಚರ್ಚೆ ಬೇಡ. ನಮ್ಮ ರಾಜಕಾರಣಿಗಳು ಹೇಳಿಕೆ ಕೊಡುವುದನ್ನ ಬಿಟ್ಟು ಡಿಪಿಆರ್ ಸಿದ್ಧಪಡಿಸುವತ್ತ ಒತ್ತು ನೀಡಬೇಕು ಎಂದರು.
ಕೇಂದ್ರದಿಂದ ರಾಜ್ಯದ ಪಾಲಿನ ಹಣ ಬರುತ್ತಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಪ್ರತಾಪಸಿಂಹ, ಸಿದ್ದರಾಮಯ್ಯ 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಅವರಿಗೆ ಎಲ್ಲವೂ ಗೊತ್ತು. ಹೆದ್ದಾರಿ ಕೆಲಸಕ್ಕೆ 95 ಸಾವಿರ ಕೋಟಿ ರೂ, ಬೆಂಗಳೂರು-ಮೈಸೂರು ದಶಪಥ ರಸ್ತೆಗೆ 8,066 ಕೋಟಿ ರೂ. ಕೇಂದ್ರ ಸರ್ಕಾರ ಕೊಟ್ಟಿದೆ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡುತ್ತಿರುವುದು ಮೋದಿ ಸರ್ಕಾರ, ಸಿದ್ದರಾಮಯ್ಯ ರಾಜಕೀಯಕ್ಕಾಗಿ ಮಾತನಾಡುವುದನ್ನು ಬಿಡಬೇಕು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರದ ಬಳಿ ರಾಜ್ಯದ ಅನುದಾನ ತರಲಾರರು ಎಂದಿರುವ ಸಿದ್ದರಾಮಯ್ಯ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪಸಿಂಹ, ಬಸವರಾಜ ಬೊಮ್ಮಾಯಿ ಅವರ ತಂದೆ ಸಿಎಂ ಆಗಿದ್ದವರು, ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಾರೆ. ಚಾಣಾಕ್ಷ ರಾಜಕಾರಣಿ ಎಂದು ಹೇಳಿದರು.