ಮೈಸೂರು: ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಕಳಪೆ ಕಾಮಗಾರಿ ನಡೆದಿಲ್ಲ. ಅತೀ ಹೆಚ್ಚು ಮಳೆಯಾಗಿದ್ದರಿಂದ ನಿರ್ಮಾಣ ಹಂತದ ಹೆದ್ದಾರಿಯಲ್ಲಿ ಈ ರೀತಿ ವ್ಯತ್ಯಾಸಗಳಾಗುವುದು ಸಾಮಾನ್ಯ ಎಂದು ಸಂಸದ ಪ್ರತಾಪ್ ಸಿಂಹ ಫೇಸ್ಬುಕ್ ಲೈವ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಪರೀತ ಮಳೆಯಿಂದ ರಾಮನಗರ ಮತ್ತು ಚನ್ನಪಟ್ಟಣ ಬೈಪಾಸ್ ರಸ್ತೆಯಲ್ಲಿ ನೀರು ತುಂಬಿ ಹಲವಾರು ರೀತಿಯ ಸಮಸ್ಯೆ ಉಂಟಾಗಿದ್ದು, ನಿರ್ಮಾಣ ಹಂತದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಈ ರೀತಿ ವ್ಯತ್ಯಾಸ ಆಗುವುದು ಸಾಮಾನ್ಯ. ಜನರು ಬೇರೆ ಅರ್ಥ ಕಲ್ಪಿಸಬೇಡಿ ಎಂದು ಮನವಿ ಮಾಡಿದ್ದಾರೆ ಸಂಸದ ಪ್ರತಾಪ್ ಸಿಂಹ. ಮಂಡ್ಯ ಮತ್ತು ರಾಮನಗರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜೊತೆಗೆ ಕೆರೆ ಕೋಡಿ ಬಿದ್ದಿರುವ ಕಾರಣ ಹೆಚ್ಜಿನ ನೀರು ಹರಿದುಬಂದು ರಸ್ತೆಯಲ್ಲಿ ನಿಂತಿದೆ. ಆದರೆ ಈಗ ಆ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಕಾಮಗಾರಿ ಜವಾಬ್ದಾರಿ ಹೊತ್ತ ಏಜೆನ್ಸಿಯವರು ಮಾಡುತ್ತಿದ್ದಾರೆ.
ಜಲಾವೃತಗೊಂಡ ಹೆದ್ದಾರಿ ಪ್ರದೇಶಕ್ಕೆ ಅಧಿಕಾರಿಗಳು ಹಾಗೂ ಕಾಮಗಾರಿಯ ಇಂಜಿನಿಯರ್ಗಳು ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿದ್ದು, ಸಮಸ್ಯೆಯನ್ನು ಬಗೆಹರಿಸಲಿದ್ದು ಯಾರೂ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಇದನ್ನೂ ಓದಿ: ರಾಮನಗರ ಜಿಲ್ಲೆಯಾದ್ಯಂತ ಭಾರಿ ಮಳೆ.. ಮೂರು ದಿನ ಬೆಂಗಳೂರು ಮತ್ತು ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್