ಮೈಸೂರು: "ಜೆಡಿಎಸ್‌ಗೆ ಯಾವುದೇ ತತ್ವ ಸಿದ್ದಾಂತಗಳಿಲ್ಲ. ಅವರಿಗೆ ಓಟ್ ಹಾಕಿದರೆ ಬಿಜೆಪಿಗೆ ಓಟ್ ಹಾಕಿದಂತೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ಜೆ.ಕೆ.ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
"ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಮೈಸೂರು, ಚಾಮರಾಜನಗರ ಜಿಲ್ಲೆಯ 15ಕ್ಕೆ 15 ಕ್ಷೇತ್ರಗಳಲ್ಲೂ ಪಕ್ಷ ಗೆಲ್ಲಲಿದೆ" ಎಂದರು.
ಜೆಡಿಎಸ್ ಪಕ್ಷದ ಕುರಿತು ಮಾತನಾಡಿ, "ರಾಜ್ಯದಲ್ಲಿರುವುದು ಜನಪರ ಸರ್ಕಾರವಲ್ಲ. ಇದು ಹಿಂಬಾಗಿಲ ಮೂಲಕ ಅಧಿಕಾರಕ್ಕೆ ಬಂದಿರುವ ಸರ್ಕಾರ. ಕಾಂಗ್ರೆಸ್‌ನ 14 ಶಾಸಕರನ್ನು ಸಿದ್ದರಾಮಯ್ಯನವರೇ ಬಿಜೆಪಿಗೆ ಕಳುಹಿಸಿದ್ದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಹಾಗಾದರೆ ಜೆಡಿಎಸ್ ನ ಮೂವರು ಶಾಸಕರನ್ನು ಯಾರು ಬಿಜೆಪಿಗೆ ಕಳಿಸಿದರು, ನಿಮಗೆ ನಾಚಿಕೆಯಾಗುವುದಿಲ್ಲವೇ? ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಕಾರಣ" ಎಂದು ವಾಗ್ದಾಳಿ ನಡೆಸಿದರು.
"ಜೆಡಿಎಸ್ ಎಂದಿಗೂ ಗೆದ್ದೆತ್ತಿನ ಬಾಲ ಹಿಡಿಯುತ್ತದೆ. ನಾವು ಇನ್ನೆಂದೂ ಜೆಡಿಎಸ್ ಅನ್ನು ಸೇರಿಸಿಕೊಳ್ಳುವುದಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಹೊಂದಾಣಿಕೆ ಬೇಡ ಎಂದಿದ್ದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಕೇಳಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸೀಟು ಗೆದ್ದರೆ ಹೆಚ್ಚು" ಎಂದರು. "ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ಅಲಿಬಾಬಾ ಚಾಲೀಸ್ ಚೋರ್ ಇದ್ದಂತೆ. ಇಂತಹ ಭ್ರಷ್ಟ ಸರ್ಕಾರ ಮುಂದೆಯೂ ಬರಬೇಕಾ" ಎಂದು ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, "ಇದು ಜನರ ಧ್ವನಿಯಾಗಿರುವ ಯಾತ್ರೆ. ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಯಾತ್ರೆ ಮಾಡುತ್ತಿದ್ದೇವೆ. ಏನಾದರೂ ಮಾಡಿ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಜನರು ಸಹ ಸಂಕಲ್ಪ ಮಾಡಿದ್ದಾರೆ. ಜನರು ನಮಗೆ ಕೊಟ್ಟ ಸ್ವಾಗತ ಮೈಸೂರು ಚಾಮರಾಜನಗರ ಜಿಲ್ಲೆಯ 15 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಿಸುವುದಾಗಿ ಕೊಟ್ಟಿರುವ ಸ್ವಾಗತ" ಎಂದರು.
"ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ಗೆ ಬೆಂಬಲ ಕೊಟ್ಟೆವು. ಆದರೆ ಕುಮಾರಸ್ವಾಮಿಗೆ ಅಧಿಕಾರ ಉಳಿಸಿಕೊಳ್ಳಲಾಗಲಿಲ್ಲ. ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರೂ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಸಿದ್ಧರಾಮಯ್ಯನವರಿಗೆ ಅವಕಾಶ ಮಾಡಿಕೊಡಿ" ಎಂದು ಮನವಿ ಮಾಡಿದರು.
ಬಿಜೆಪಿ ನಾಯಕರ ಕಾಲೆಳೆದ ಡಿಕೆಶಿ: ನನ್ನ ಸ್ನೇಹಿತ ಸಂಸದ ಪ್ರತಾಪ್ ಸಿಂಹ ಯೂನಿವರ್ಸಿಟಿಯಲ್ಲಿ ಹುದ್ದೆಗಳ ಮಾರಾಟದ ಬಗ್ಗೆ ಹೇಳಿದ್ದಾರೆ. ನಾಲ್ಕು ಕೋಟಿ ಹಣ ಕೊಡಬೇಕು ಅಂತಾ ಪ್ರತಾಪ್ ಸಿಂಹ ಸತ್ಯವನ್ನೇ ಹೇಳಿದರು. ಮತ್ತೊಬ್ಬ ಮಾಜಿ ಸಚಿವರು ಒಂದು ಓಟಿಗೆ ಆರು ಸಾವಿರ ಕೊಟ್ಟು ಬೇಕಾದರೂ ಗೆಲ್ಲುತ್ತೇನೆಂದು ಹೇಳಿದ್ದಾರೆ ಎಂದಿದ್ದಲ್ಲದೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಹೇಳದೆ ಪರೋಕ್ಷ ಟೀಕೆ ಮಾಡಿದರು. ಜೊತೆಗೆ, ಯತ್ನಾಳ್ ಸೇರಿದಂತೆ ಬಿಜೆಪಿಯ ನಾಯಕರು ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನೇ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹರಿಹಾಯ್ದರು.
ಕೆ.ಎಸ್.ಈಶ್ವರಪ್ಪ ಕುರಿ ಕಾಯಬೇಕಿತ್ತು: ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಸಂವಿಧಾನ ಇಲ್ಲವಾಗಿದ್ದರೆ ಕೆ.ಎಸ್.ಈಶ್ವರಪ್ಪ ಕುರಿ ಕಾಯಬೇಕಿತ್ತು ಎಂದರು. ಹಾಗಾಗಿ, ಸಂವಿಧಾನ ಬೇಕಾ ಅಥವಾ ರಾಜಾಡಳಿತ ಶಾನಭೋಗರ ಆಡಳಿತ ಬೇಕಾ? ಇದನ್ನು ನೀವೇ ನಿರ್ಧಾರ ಮಾಡಿ. ಸಂವಿಧಾನ ಉಳಿಯಬೇಕಾದರೆ ಬಿಜೆಪಿ ತೊಲಗಬೇಕು ಎಂದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಪ್ರಜಾಧ್ವನಿ ಯಾತ್ರೆ: ಮೋದಿ, ರಾಜ್ಯ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ