ಮೈಸೂರು: ಮರಳು ಮಾಫಿಯಾ ತಡೆಯಲು ಶೀಘ್ರದಲ್ಲೇ ಕಠಿಣ ಮರಳು ನೀತಿ ಜಾರಿಗೆ ತರುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿಚಕ್ರ ವಾಹನ, ಎತ್ತಿನ ಗಾಡಿಯಲ್ಲಿ ರೈತರು ಮತ್ತು ಸ್ಥಳೀಯರು ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ದಾಖಲು ಮಾಡದಂತೆ ಗಣಿ ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದರು.
ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ ಬಿಟ್ಟು ಬೇರೆಯವರು ಮುಖ್ಯಮಂತ್ರಿ ಆಗ್ತಾರೆಂಬ ಮಾತು ಕೇವಲ ಮಾಧ್ಯಮದ ವಲಯದಲ್ಲಿ ಮಾತ್ರವೇ ಇದೆ ಎಂದು ಹೇಳಿದರು. ಕೋವಿಡ್ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತಿದೆ. ಎಲ್ಲ ಸಚಿವರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಕೋವಿಡ್ ನಿರ್ವಹಣೆಗಾಗಿ ಅಧಿಕಾರಿಗಳು ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ನನ್ನ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳು ಶೇ. 80ರಷ್ಟು ಖಾಲಿ ಇವೆ. ಕೊರೊನಾ ಸವಾಲನ್ನು ಜಿಲ್ಲಾಡಳಿತಗಳು ಮತ್ತು ಸರ್ಕಾರ ಸಮರ್ಥವಾಗಿ ಎದುರಿಸುತ್ತಿದೆ. ಹಾಸಿಗೆಗಳಿಗೆ ಕೊರತೆ ಇಲ್ಲ. ಆಕ್ಸಿಜನ್ ಬೇಡಿಕೆ ಕಡಿಮೆ ಆಗಿದೆ ಎಂದರು.
ಫಂಗಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸೋಂಕಲ್ಲ. ಆದರೂ ಜಾಗರೂಕತೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲಾಕ್ ಫಂಗಸ್ ಔಷಧಿ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ. ಪ್ರತಿ ತಾಲೂಕಿನಲ್ಲೂ ಆಕ್ಸಿಜನ್ ಜನರೇಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಮಂಡ್ಯಕ್ಕೆ ಧರ್ಮಸ್ಥಳದಿಂದ 5 ಟನ್ ಆಕ್ಸಿಜನ್ ಸಹಾಯ
ಹೊಸ ನರ್ಸಿಂಗ್ ಕಾಲೇಜು ಬೇಡ ಅನ್ನುವ ತೀರ್ಮಾನಕ್ಕೆ ಬರಲಾಗಿತ್ತು. ಈಗ ನರ್ಸ್‌ಗಳ ಕೊರತೆ ಉಂಟಾಗಿದೆ. ನರ್ಸಿಂಗ್ ಕಾಲೇಜು ತೆರೆಯಲು ಶೈಕ್ಷಣಿಕ ಸಂಸ್ಥೆಗಳು ಮುಂದೆ ಬಂದರೆ ಅನುಮತಿ ನೀಡಲಾಗುವುದು. ಕೋವಿಡ್‌ನಲ್ಲಿ ಕೆಲಸ ಮಾಡುವವರಿಗೆ ಗ್ರೇಸ್ ಮಾರ್ಕ್ ನೀಡಲಾಗುವುದು ಎಂದರು. ಬಳ್ಳಾರಿಯಲ್ಲಿ ಮೈನಿಂಗ್ ಆಫ್ ಸ್ಕೂಲ್ ತೆರೆಯಲಾಗುವುದು. ಇದರಿಂದ ಗಣಿಗಾರಿಕೆಗಳ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.