ಮೈಸೂರು: ನಗರದಲ್ಲಿ ಹಳೆ ನೋಟುಗಳ ಬದಲಾವಣೆ ದಂಧೆ ನಡೆಸುತ್ತಿದ್ದ ಪಂಜಾಬ್ ಮೂಲದ ವ್ಯಕ್ತಿಯನ್ನು ಪೊಲೀಸರು ಶೂಟೌಟ್ ಮೂಲಕ ಹೊಡೆದುರುಳಿಸಿದ್ದಾರೆ.
ನಗರದ ರಿಂಗ್ ರಸ್ತೆಯಲ್ಲಿ ಪೊಲೀಸರು ನಡೆಸಿದ ಶೂಟೌಟ್ಗೆ ಬಲಿಯಾದ ವ್ಯಕ್ತಿ ಸುಕ್ವಿಂದರ್ ಸಿಂಗ್ (40) ಈತ ಪಂಜಾಬ್ನ ಪರಿಧಾಕೋಟ್ ಪ್ರದೇಶದವನು ಎಂದು ತಿಳಿದು ಬಂದಿದೆ. ಈತ ಅಮಾನ್ಯಗೊಂಡ ಹಳೆಯ ನೋಟುಗಳನ್ನು ಬದಲಾವಣೆ ಮಾಡುವ ದಂಧೆಯಲ್ಲಿ ತೊಡಗಿದ್ದು, ಮೈಸೂರಿನ ವ್ಯಕ್ತಿಯೊಬ್ಬ 500 ಕೋಟಿ ಹಳೆ ನೋಟುಗಳಿವೆ ಎಂದು ಈತನನ್ನು ಕರೆಸಿಕೊಂಡಿದ್ದು, ಸುಕ್ವಿಂದರ್ ತನ್ನ ಇಬ್ಬರು ಸಹಚರರೊಂದಿಗೆ ಪಂಜಾಬ್ನಿಂದ ಬಂದು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದ.
ಮೋಸ ಹೋದವನಿಂದಲೇ ಸ್ಕೆಚ್:
ಸುಕ್ವಿಂದರ್ ಸಿಂಗ್ ಮೈಸೂರಿನ ಕುವೆಂಪುನಗರದ ನಿವಾಸಿ ಜಯ್ ಕುಮಾರ್ ಎಂಬಾತನಿಂದ 10 ಲಕ್ಷ ಪಡೆದು ಮೋಸ ಮಾಡಿದ್ದ. ಈ ಕಾರಣಕ್ಕಾಗಿ ಈತನೇ ಪುನಃ ಸುಕ್ವಿಂದರ್ ಸಿಂಗ್ಗೆ ಕರೆ ಮಾಡಿ 500 ಕೋಟಿ ಹಳೆಯ ನೋಟುಗಳ ಬದಲಾವಣೆ ಇದೆ ಎಂದು ಕರೆಸಿಕೊಂಡಿದ್ದ. ಅದರಂತೆ ಮೈಸೂರಿಗೆ ಬಂದಿದ್ದ ಈತನ ಬಗ್ಗೆ ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದ.
ಖಾಕಿ ಪಡೆಯ ಕಾರ್ಯಾಚರಣೆ:
ನಿನ್ನೆ ಬೆಳಿಗ್ಗೆ 9.16 ರ ಸಮಯದಲ್ಲಿ ಹೆಬ್ಬಾಳ ರಿಂಗ್ ರಸ್ತೆಯ ಬಳಿಯಲ್ಲಿ ಸ್ಥಳೀಯ ಕಾರನ್ನು ಬಾಡಿಗೆ ತೆಗೆದುಕೊಂಡು ಬಂದಿದ್ದ ಈ ಮೂರು ಜನ, ರಿಂಗ್ ರಸ್ತೆಯ ಟೀ ಅಂಗಡಿ ಬಳಿ ಕಾರಿನಲ್ಲಿ ಕುಳಿತಿದ್ದರು. ಖಚಿತ ಮಾಹಿತಿಯ ಮೇಲೆ ವಿಜಯನಗರ ಇನ್ಸ್ಪೆಕ್ಟರ್ ಕುಮಾರ್ ತನ್ನ ನಾಲ್ಕು ಜನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಸುಕ್ವಿಂದರ್ ಸಿಂಗ್ ಪೊಲೀಸರ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಇನ್ಸ್ಪೆಕ್ಟರ್ ಸುಕ್ವಿಂದರ್ ಮೇಲೆ ಫೈರಿಂಗ್ ಮಾಡಿದ್ದಾರೆ. ಆಗ ಆತ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಘಟನೆಯಲ್ಲಿ ಮೂರು ಜನ ಪೊಲೀಸರಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಕ್ವಿಂದರ್ ಜೊತೆ ಇದ್ದ ಇಬ್ಬರು ಪರಾರಿಯಾಗಿದ್ದು, ಅವರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.