ಮೈಸೂರು: ವ್ಯಕ್ತಿಯಿಂದ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಮೊಬೈಲ್ ಕಳ್ಳರನ್ನು ಹಿಂಬಾಲಿಸಿದ ಗುಪ್ತಚರ ಇಲಾಖೆಯ ಕಾನ್ಸ್‌ಟೇಬಲ್ ಸಿನಿಮೀಯ ರೀತಿಯಲ್ಲಿ ಕಳ್ಳರನ್ನ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ನಗರದ ಡಿಸಿ ಕಚೇರಿ ಪಕ್ಕದಲ್ಲಿರುವ ಉದ್ಯಾನದಲ್ಲಿ ಈ ಘಟನೆ ನಡೆದಿದೆ.
ನಿನ್ನೆ(ಸೋಮವಾರ) ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಯ ಪಕ್ಕದಲ್ಲಿರುವ ಉದ್ಯಾನದಲ್ಲಿ ವ್ಯಕ್ತಿಯೊಬ್ಬ ಕುಳಿತು ಮೊಬೈಲ್ ನೋಡುತ್ತಿದ್ದ. ಆ ವೇಳೆ ಅಲ್ಲಿಗೆ ಬಂದ ಇಬ್ಬರು ಯುವಕರು ಮನೆಗೆ ಕರೆ ಮಾಡಬೇಕು ಎಂದು ಮೊಬೈಲ್ ಕೇಳಿದ್ದಾರೆ. ಅವರ ಮಾತನ್ನು ನಂಬಿದ ವ್ಯಕ್ತಿ ಮೊಬೈಲ್ ನೀಡಿದ್ದಾನೆ.
ಮೊಬೈಲ್ ಪಡೆದುಕೊಂಡ ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ವ್ಯಕ್ತಿ ಮೊಬೈಲ್ ಕಳ್ಳ, ಮೊಬೈಲ್ ಕಳ್ಳ ಎಂದು ಕೂಗಿದ್ದಾರೆ. ಯುವಕರು ಮೊಬೈಲ್ ತೆಗೆದುಕೊಂಡು ಓಡಿ ಹೋಗುತ್ತಿರುವುದನ್ನು ಅಲ್ಲೇ ಇದ್ದ ಗುಪ್ತಚರ ಇಲಾಖೆಯ ಕಾನ್ಸ್‌ಟೇಬಲ್ ನೋಡಿ ಅವರನ್ನು ಹಿಂಬಾಲಿಸಿ, ಹಿಡಿದು ಲಕ್ಷ್ಮಿಪುರಂ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ಉದ್ಯಾನದಲ್ಲಿ ಇದ್ದ ವ್ಯಕ್ತಿ ಯುವಕರಿಗೆ ಪರಿಚಯವಿರುವ ಯುವತಿಯೊಬ್ಬಳ ಫೋಟೋ ಕಳುಹಿಸಿ ಕಿರುಕುಳ ಕೊಡುತ್ತಿದ್ದ. ಅದಕ್ಕಾಗಿ ಮೊಬೈಲ್ ಕಿತ್ತುಕೊಂಡು ಫೋಟೋ ಡಿಲೀಟ್ ಮಾಡಲು ಯತ್ನಿದ್ದೇವೆ ಎಂದು ವಿಚಾರಣೆ ವೇಳೆ ಯುವಕರನ್ನು(ಕಳ್ಳರು) ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಬಗ್ಗೆ ಲಕ್ಷ್ಮಿಪುರಂ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Watch.. ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ