ಮೈಸೂರು: ಮೂರು ನದಿಗಳ ಸಂಗಮದ ತ್ರಿವೇಣಿ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿರುವ ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಈ ಬಾರಿಯೂ ಕೈ ಮತ್ತು ತೆನೆ ನಡುವೆ ನೇರ ಪೈಪೋಟಿ ಇದ್ದು, ಇದರ ಮಧ್ಯೆ ಬಿಜೆಪಿ ಸಹ ಪ್ರಬಲ ಪಕ್ಷವಾಗಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ತ್ರಿವೇಣಿ ಸಂಗಮದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದ್ದು, ಟಿಕೆಟ್ ಆಕಾಂಕ್ಷಿತರ ಪಟ್ಟಿ ಕೂಡ ಹಿರಿದಾಗುತ್ತಾ ಹೋಗುತ್ತಿದೆ. ತನ್ನದೇಯಾದ ಇತಿಹಾಸ ಹೊಂದಿರುವ ಈ ಕ್ಷೇತ್ರ, ರಾಜ್ಯ ರಾಜಕೀಯ ವಿದ್ಯಮಾನಗಳಿಂದ ಸುದ್ದಿಯಾಗಿದ್ದು, ಹಳೆಯ ಮಾತು. ಸದ್ಯ ವಿಧಾನಸಭಾ ಚುನಾವಣೆ ಆಗಮನದ ಹಿನ್ನೆಲೆಯಲ್ಲಿ ಮತ್ತೆ ಸುದ್ದಿಯಲ್ಲಿದೆ. ಮೂರು ಪಕ್ಷಗಳಿಂದ ಭರ್ಜರಿ ತಯಾರಿ ನಡೆದಿದ್ದು, ಕ್ಷೇತ್ರದ ಟಿಕೆಟ್ಗಾಗಿ ಒಳಗೊಳಗೆ ಪೈಪೋಟಿ ಕೂಡ ನಡೆದಿದೆ.
ಕ್ಷೇತ್ರದ ವ್ಯಾಪ್ತಿ: 1978ರಿಂದಲೂ ಮೀಸಲು ಕ್ಷೇತ್ರವಾಗಿರುವ ಟಿ.ನರಸೀಪುರ ಪುರಸಭೆ, ಪಂಚಾಯಿತಿ, ಮೂಗೂರು, ತಲಕಾಡು, ಸೋಸಲೆ ಮತ್ತು ಬನ್ನೂರು ಹೋಬಳಿಗಳು ಹಾಗೂ ಬನ್ನೂರು ಪುರಸಭೆ ವ್ಯಾಪ್ತಿ ಸೇರುತ್ತದೆ.
ಕ್ಷೇತ್ರದ ವೈಶಿಷ್ಟ್ಯತೆ: ಮೂರು ಅವಧಿಗೂ ಭತ್ತ ಬೆಳೆಯುವುದು ಕ್ಷೇತ್ರದ ಮತ್ತೊಂದು ವೈಶಿಷ್ಟ್ಯ. ಜತೆಗೆ ರಾಜಶೇಖರ್ ಮೂರ್ತಿ ಅವರಂತಹ ಜನಪರ ರಾಜಕಾರಣಿಯನ್ನು ಕೊಟ್ಟ ಕ್ಷೇತ್ರವಾಗಿದೆ. ಜಿಪಂ ಸದಸ್ಯರಾಗಿದ್ದ ಅಶ್ವಿನ್ ಕುಮಾರ್ ತೆನೆ ಹೊತ್ತು ಗೆದ್ದಿದ್ದು, ಹಾಲಿ ಶಾಸಕರಾಗಿ ಜನರೊಟ್ಟಿಗೆ ಅಭಿವೃದ್ಧಿ ಕೆಲಸದಲ್ಲಿ ತೊಡಗಿದ್ದಾರೆ. ಈಗಾಗಲೇ ಪಕ್ಷದಿಂದ ಟಿಕೆಟ್ ಖಚಿತವಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಬಿರುಸಿನ ಪ್ರಚಾರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ತಂದೆಯ ನಡೆಯತ್ತ ಮಗನ ಚಿತ್ತ: ಕ್ಷೇತ್ರದಲ್ಲಿ ಕಾಂಗ್ರೆಸ್ ಕೂಡ ಪ್ರಾಬಲ್ಯ ಹೊಂದಿದ್ದು, ಟಿಕೆಟ್ ವಿಚಾರದಲ್ಲಿ ಕಾದು ನೋಡುವ ತಂತ್ರ ರೂಪಿಸಿದೆ. ತೆರೆಮರೆಯಲ್ಲಿ ತಂದೆ ಡಾ. ಹೆಚ್. ಸಿ. ಮಹದೇವಪ್ಪ ಹಾಗೂ ಪುತ್ರ ಸುನೀಲ್ ಬೋಸ್ ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ಅನ್ನೋದು ಕುತೂಹಲ ಮೂಡಿಸಿದೆ. ಮಹದೇವಪ್ಪ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟು ನಂಜನಗೂಡು ಕ್ಷೇತ್ರದತ್ತ ಮುಖ ಮಾಡುವ ಚಿಂತನೆಯಲ್ಲಿದ್ದರು. ಸದ್ಯ ರಾಜ್ಯ ರಾಜಕೀಯದಲ್ಲಾದ ದಿಢೀರ್ ಬದಲಾವಣೆಯಿಂದ (ಇತ್ತೀಚೆಗೆ ನಿಧನರಾದ ಧ್ರುವನಾರಾಯಣ ಪುತ್ರ ದರ್ಶನ್ಗೆ ನಂಜನಗೂಡು ಕ್ಷೇತ್ರದ ಟಿಕೆಟ್ ಕೊಡುವ ಸಾಧ್ಯತೆ ಹೆಚ್ಚಿದೆ) ಅದು ಅಸಾಧ್ಯದ ಮಾತು.
ಮತ್ತೊಂದೆಡೆ ಕಾಂಗ್ರೆಸ್ ಪಕ್ಷದಿಂದ ಯಾರೇ ಸ್ಪರ್ಧೆ ಮಾಡಿದರೂ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್ ಕೊಡಲಾಗುತ್ತದೆ ಎಂಬ ಮಾತಿದೆ. ಅಲ್ಲದೇ ಇಂದಿಗೂ ಹೈಕಮಾಂಡ್ ಟಿಕೆಟ್ ಯಾರಿಗೆ ಎಂದು ಖಚಿತ ಮಾಡದ ಹಿನ್ನೆಲೆಯಲ್ಲಿ ಮಹದೇವಪ್ಪ ಅವರ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆಯಿದೆ. ಕ್ಷೇತ್ರದ ಜನರು ಮಹದೇವಪ್ಪ ಅವರ ಅಭಿವೃದ್ಧಿ ಕಾರ್ಯ ನೆನಪಿಟ್ಟು ಮತ ನೀಡುವ ಮನಸ್ಸು ಮಾಡಿದರಷ್ಟೇ ಕ್ಷೇತ್ರ ಕೈ ಪಾಲಾಗಲಿದೆ. ಇನ್ನು, ಪುತ್ರ ಸುನೀಲ್ ಬೋಸ್ ಆಗಾಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರೇ ಸ್ಪರ್ಧಿಸುತ್ತಾರಾ ಇಲ್ಲವೋ ಎಂಬುದು ಇಂದಿಗೂ ಖಚಿತವಾಗಿಲ್ಲ.
ಬಿಜೆಪಿಯಲ್ಲೂ ಟಿಕೆಟ್ಗೆ ಪೈಪೋಟಿ: ಪ್ರಾಬಲ್ಯದ ಕೊರತೆ ನಡುವೆಯೂ ಕ್ಷೇತ್ರದಲ್ಲಿ ಸಂಘಟನೆ ಮಾಡುವುದರಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಡಾ. ಭಾರತಿ ಶಂಕರ್, ಡಾ. ರೇವಣ್ಣ, ಸಂಸದ ವಿ. ಶ್ರೀನಿವಾಸಪ್ರಸಾದ್ ಅವರ ಪುತ್ರಿ ಪ್ರತಿಮಾ ಪ್ರಸಾದ್, ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಸಿ. ರಮೇಶ್ ಮೊದಲಾದವರು ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ಜೆಡಿಎಸ್‌ನಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋತಿದ್ದ ಸುಂದರೇಶ್ ಅವರ ಪುತ್ರ ಸಾಮ್ರಾಟ್ ಸುಂದರೇಶನ್ ಸಹ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದಾರೆ.
ಮತಗಳ ಲೆಕ್ಕಾಚಾರ: ಈ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ, ಲಿಂಗಾಯಿತ, ಒಕ್ಕಲಿಗ, ಕುರುಬ, ನಾಯಕ, ಮುಸ್ಲಿಂ ಹಾಗೂ ಇತರೆ ಸೇರಿ ಒಟ್ಟು (ಅಂದಾಜು) 2,13,923 ಜನಸಂಖ್ಯೆಯಿದೆ. 198434 ಒಟ್ಟು ಮತದಾರರಿದ್ದು ಇದರಲ್ಲಿ 98830 ಪುರುಷರು, 99591 ಮಹಿಳೆಯರು ಹಾಗೂ 13 ಇತರೆ ಮತಗಳಿವೆ.
ಈವರೆಗೆ ಗೆದ್ದ ಅಭ್ಯರ್ಥಿಗಳು:
1952 : ಎಸ್.ಶ್ರೀನಿವಾಸ ಅಯ್ಯಂಗಾರ್ (ಕೆಎಂಪಿಪಿ)
1957 : ಎಂ.ರಾಜಶೇಖರಮೂರ್ತಿ (ಕಾಂಗ್ರೆಸ್)
1962 : ಎಂ.ರಾಜಶೇಖರಮೂರ್ತಿ (ಕಾಂಗ್ರೆಸ್)
1967 : ಎಂ.ರಾಜಶೇಖರಮೂರ್ತಿ(ಕಾಂಗ್ರೆಸ್)
1972 : ಎಂ.ರಾಜಶೇಖರಮೂರ್ತಿ (ಕಾಂಗ್ರೆಸ್)
1978 : ಪಿ.ವೆಂಕಟರಮಣ (ಕಾಂಗ್ರೆಸ್)
1983 : ವಿ.ವಾಸುದೇವ (ಜನತಾಪಕ್ಷ)
1985 : ಡಾ.ಎಚ್.ಸಿ.ಮಹದೇವಪ್ಪ (ಜನತಾಪಕ್ಷ)
1989 : ಹೆಜ್ಜಿಗೆ ಎಂ.ಶ್ರೀನಿವಾಸಯ್ಯ (ಕಾಂಗ್ರೆಸ್)
1994 : ಡಾ.ಎಚ್.ಸಿ.ಮಹದೇವಪ್ಪ (ಜನತಾದಳ)
1999 : ಡಾ.ಎನ್.ಎಲ್.ಭಾರತೀಶಂಕರ್ (ಬಿಜೆಪಿ)
2004 : ಡಾ.ಹೆಚ್.ಸಿ.ಮಹದೇವಪ್ಪ (ಜೆಡಿಎಸ್)
2008 : ಡಾ.ಹೆಚ್.ಸಿ.ಮಹದೇವಪ್ಪ (ಕಾಂಗ್ರೆಸ್)
2013 : ಡಾ.ಹೆಚ್.ಸಿ.ಮಹದೇವಪ್ಪ (ಕಾಂಗ್ರೆಸ್)
2018 : ಎಂ.ಅಶ್ವಿನ್ ಕುಮಾರ್ (ಜೆಡಿಎಸ್)
ಇದನ್ನೂ ಓದಿ: ಪುತ್ತೂರು ಬಿಜೆಪಿ ಟಿಕೆಟ್ ಯಾರಿಗೆ? ಕೈ ಪಕ್ಷದಿಂದ ಯಾರು ನಿಲ್ತಾರೆ?