ಮೈಸೂರು: ಪ್ರೊಫೆಸರ್ ವಿರುದ್ಧ ದೈಹಿಕ, ಮಾನಸಿಕ ಕಿರುಕುಳ ಹಾಗು ಜಾತಿ ನಿಂದನೆ ಆರೋಪಗಳನ್ನು ಮಾಡಿರುವ ಪಿಹೆಚ್ಡಿ ವಿದ್ಯಾರ್ಥಿನಿಯೊಬ್ಬರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರಿನ ವಿವರ: "ನಾನು ರಿಸರ್ಚ್ ಸ್ಕಾಲರ್ ಆಗಿ ಕೆಲಸ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಪ್ರೊಫೆಸರ್ ನನಗೆ ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದಾರೆ. ಫೆಲೋಶಿಪ್ ಬಿಲ್‌ಗೆ ಸಹಿ ಮಾಡಲು ನನ್ನಿಂದ ಉಡುಗೊರೆಗಳನ್ನು ತರಿಸಿಕೊಳ್ಳುತ್ತಿದ್ದರು. ಪಂಚತಾರಾ ಹೋಟೆಲ್‌ಗಳಿಗೆ ಕರೆದುಕೊಂಡು ಹೋಗಿ ನನ್ನ ಹಣದಿಂದಲೇ ಬಿಲ್ ಪಾವತಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಅವರು ದೂರನ್ನು ವಾಪಸ್ ತೆಗೆದುಕೊಂಡು ಮಾರ್ಗದರ್ಶಕರನ್ನು ಬದಲಾಯಿಸಿಕೊಳ್ಳುವಂತೆ ನನಗೆ ಒತ್ತಡ ಹೇರಿದ್ದಾರೆ" ಎಂದು ವಿದ್ಯಾರ್ಥಿನಿ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಕರಣಗಳು- ರಸ್ತೆ ಅಪಘಾತ: ಬೈಕ್‌ನಿಂದ ಕೆಳಗೆ ಬಿದ್ದು ಸವಾರ ಮೃತಪಟ್ಟಿರುವ ಘಟನೆ ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಬಳಿ ಮಂಗಳವಾರ ನಡೆಯಿತು. ಮೃತರನ್ನು ಪಿರಿಯಾಪಟ್ಟಣದ ನಿವಾಸಿ ಪ್ರತೀಪ್ (31) ಎಂದು ಗುರುತಿಸಲಾಗಿದೆ. ನಗರದ ಬೋಗಾದಿಯ ಕಿಡ್ ವಿಂಟ್ರೋನಲ್ಲಿ ಪ್ರತೀಪ್, ಇವೆಂಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಪಿರಿಯಾಪಟ್ಟಣದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದಾಗ ಕೆಳಗೆ ಬಿದ್ದಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ವಿ.ವಿ.ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಭ್ರೂಣ ಹತ್ಯೆ ಪ್ರಕರಣ: ಹೆಣ್ಣು ಭ್ರೂಣ ಹತ್ಯೆ ಕುರಿತು ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಪ್ರಾಥಮಿಕ ವರದಿ ನೀಡುವಂತೆ ಸೋಮವಾರ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಭ್ರೂಣ ಹತ್ಯೆ ಪ್ರಕರಣಗಳ ಕುರಿತಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.