ಮೈಸೂರು: ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಕೇಸ್ ಪತ್ತೆಯಾಗದ ಹಿನ್ನೆಲೆಯಲ್ಲಿ ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟಿಗೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿದೆ.
ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಕೊರೊನಾ ಸೋಂಕಿತರು 88 ಜನ ಈಗಾಗಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು , ಕೇವಲ ಇಬ್ಬರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ವ್ಯಾಪಾರಸ್ಥರ ಹಿತದೃಷ್ಟಿಯಿಂದ ಇಂದಿನಿಂದ ವ್ಯಾಪಾರ ವಹಿವಾಟಿಗೆ ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿದೆ.
ಈ ಹಿಂದೆ ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ 91 ವಾಣಿಜ್ಯ ರಸ್ತೆಗಳಲ್ಲಿ ಅವಶ್ಯಕವಲ್ಲದ ಸಾಮಗ್ರಿಗಳ ಮಾರಾಟ ಮಳಿಗೆ ತೆರೆಯುವುದನ್ನು ನಿರ್ಬಂಧಿಸಿತ್ತು. ಆದರೆ, ಸೋಂಕು ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದಿನಿಂದ ನಗರದ ಎಲ್ಲಾ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಅವಶ್ಯಕ ದಿನಬಳಕೆ ವಸ್ತುಗಳ ಜೊತೆಗೆ ಇನ್ನಿತರ ಸಾಮಗ್ರಿಗಳನ್ನೂ ಸಹ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.
ವ್ಯಾಪಾರದ ಸಮಯವನ್ನು ಬೆಳಗ್ಗೆ 7 ಗಂಟೆ ಯಿಂದ ಸಂಜೆ 7 ಗಂಟೆ ವರೆಗೆ ನಿಗದಿಪಡಿಸಲಾಗಿದೆ. ಆದರೆ, ಸಲೂನ್ ಗಳು, ಬ್ಯೂಟಿ ಪಾರ್ಲರ್, ಸ್ಪಾ , ಸಿನಿಮಾ ಮಂದಿರಗಳು, ಬಸ್, ಆಟೋ, ಟ್ಯಾಕ್ಸಿ ಹಾಗೂ ಧಾರ್ಮಿಕ ಸ್ಥಳಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಇವುಗಳಿಗೆ ಅವಕಾಶ ಇಲ್ಲ ಎಂದು ಮೈಸೂರು ಮಹಾನಗರ ಪಾಲಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.