ಮೈಸೂರು: ನಗರದ ಹೊರವಲಯದ ನಾಗನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಪಕ್ಕದಲ್ಲೇ ಬಾರ್ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕೃಷಿ ವಿವಿ ಪಕ್ಕದಲ್ಲಿ ಬಾರ್ ತೆರೆಯಲು ಅನುಮತಿ ಕೊಡುವ ಮೂಲಕ ಕೃಷಿ ಪಾವಿತ್ರ್ಯತೆಗೆ ಧಕ್ಕೆ ಉಂಟು ಮಾಡಲಾಗಿದೆ. ಕೊಟ್ಟಿರುವ ಅನುಮತಿ ಹಿಂಪಡೆಯುವಂತೆ ಅಬಾಕಾರಿ ಇಲಾಖೆಗೆ ಪತ್ರ ಬರೆದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅದಲ್ಲದೆ ಶೈಕ್ಷಣಿಕ ಕೇಂದ್ರದ 220 ಮೀಟರ್ ಒಳಗೆ ಬಾರ್ ತೆರೆಯಲು ನಿಷೇಧವಿದೆ. ಆದರೂ ಅನುಮತಿ ನೀಡಿದ್ದು ಹೇಗೆ ಎಂದು ಕಾರ್ಯಕರ್ತರು ಪ್ರಶ್ನಿಸಿದರು.
ಸಂಶೋಧನೆ ಮತ್ತು ಮಾಹಿತಿಗಾಗಿ 16 ಜಿಲ್ಲೆಗಳಿಂದ ರೈತರು, ಕೃಷಿ ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಇಲ್ಲಿ ಬಾರ್ ತೆರೆಯುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಪಂ ಸದಸ್ಯ ದಿನೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಫಾರಂನಿಂದ ಒಂದೂವರೆ ಕಿಲೋ ಮೀಟರ್ ದೂರವಿದ್ದ ಮದ್ಯಂದಗಡಿಯನ್ನು ತೆರವುಗೊಳಿಸಿದ್ದ ಇದೇ ಜಿಪಂ ಸದಸ್ಯ, ಈಗ ವಿಶ್ವವಿದ್ಯಾಲಯ 500 ಮೀಟರ್ ವ್ಯಾಪ್ತಿಯಿಂದ ದೂರ ಇದೆ ಎಂದು ಸಬೂಬು ನೀಡುತ್ತಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಆಗ್ರಹಿಸಿದರು.