ಮೈಸೂರು : ಯಾವುದೇ ರಾಜಕೀಯ ಕಾರ್ಯಕ್ರಮ ಮಾಡಬೇಕಾದರೆ ಪೂರ್ವಾನುಮತಿ ಪಡೆಯಬೇಕು. ಅನುಮತಿ ಪಡೆಯದೇ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಹೇಳಿದ್ದಾರೆ. ಬುಧವಾರ ರಾಜ್ಯದ ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಜಿಲ್ಲೆಯಲ್ಲಿರುವ ಒಟ್ಟು ಮತದಾರರ ಸಂಖ್ಯೆ ಹಾಗೂ ಈ ವಿಧಾನಸಭಾ ಚುನಾವಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ. ವಿ. ರಾಜೇಂದ್ರ ಮಾಹಿತಿ: ಮೈಸೂರು ಜಿಲ್ಲೆಯ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು ಮತಗಟ್ಟೆಗಳು 2905 ಸ್ಥಾಪನೆಯಾಗಲಿವೆ. ಜಿಲ್ಲೆಯಲ್ಲಿ ಒಟ್ಟು 26,22,551 ಮಂದಿ ಮತದಾರರಿದ್ದಾರೆ. ಅದರಲ್ಲಿ ಒಟ್ಟು ಪುರುಷ ಮತದಾರರು 13,01,022, ಮಹಿಳಾ ಮತದಾರರ ಸಂಖ್ಯೆ 13,21,316 ಹಾಗೂ ಇತರೆ ಮತದಾರರ ಸಂಖ್ಯೆ 213, ಯುವ ಮತದಾರರು 47,812 ಇದ್ದು, 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರ ಸಂಖ್ಯೆ 84,917 ಇದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಭಾರತೀಯ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವಗಲ್ ಶ್ರೀನಾಥ್ ಆಯ್ಕೆ ಮಾಡಲಾಗಿದ್ದು, ಶ್ರೀನಾಥ್ ಅವರೊಟ್ಟಿಗೆ ತೃತೀಯ ಲಿಂಗಿ, ಶತಾಯುಷಿ, ಕ್ರೀಡಾಲೋಕದ ಸಾಧಕರಿಗೂ ಆಹ್ವಾನ ನೀಡಲಾಗಿದೆ. ಈ ಮೂಲಕ ಮತದಾನದ ಪ್ರಮಾಣ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಮಾಹಿತಿ : ಮೈಸೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ 10 ಚೆಕ್ ಪೋಸ್ಟ್ ಕಾರ್ಯ ನಿರ್ವಹಿಸುತ್ತಿದ್ದು, ನಿನ್ನೆಯವರೆಗೂ ಪೊಲೀಸರು ಮಾತ್ರ ಇದ್ದರು. ಇದೀಗ ನಮ್ಮ ತಂಡದ ಜೊತೆಗೆ ಕೇಂದ್ರದ ಸಿಬ್ಬಂದಿಯೂ ಸಹ ಇರುತ್ತಾರೆ. ದಿನದ 24 ಗಂಟೆಗಳ ಕಾಲ ತಪಾಸಣೆ ಇರಲಿದೆ. ರೌಡಿ ಆಕ್ಟೀವಿಟಿಸ್ ಇರುವ ಎಲ್ಲರನ್ನು ಈಗಾಗಲೇ ಗಡಿ ಪಾರು ಮಾಡಲಾಗಿದೆ. ಈವರೆಗೆ 25 ಲಕ್ಷ ನಗದು, 25 ಕೆಜಿ ಗಾಂಜಾ ಸೀಜ್ ಮಾಡಲಾಗಿದೆ. ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲವಿದ್ದು, ಕೆಲವೊಂದು ಭಾಗ ನಗರ ಪ್ರದೇಶದ ವ್ಯಾಪ್ತಿಗೆ, ಮತ್ತೆ ಕೆಲವು ಭಾಗ ಜಿಲ್ಲಾ ವ್ಯಾಪ್ತಿಯಲ್ಲಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ವಿವರಿಸಿದರು.
ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾಹಿತಿ : ಮೈಸೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಇದುವರೆಗೂ 41 ಲಕ್ಷ ಹಣವನ್ನು ಸೀಜ್ ಮಾಡಿಲಾಗಿದ್ದು. ಒಟ್ಟು 68 ಲಿಕ್ಕರ್ ಕೇಸ್ ದಾಖಲಾಗಿವೆ. 1493 ರೌಡಿ ಶೀಟರ್ ಇದ್ದು, 3 ಮಂದಿಗೆ ಈಗಾಗಲೇ ಗಡಿ ಪಾರು ಮಾಡಲಾಗಿದೆ. 9 ಮಂದಿಯನ್ನು ಪ್ರೊಸೆಸ್‌ನಲ್ಲಿಡಲಾಗಿದೆ. ಮೈಸೂರು ಜಿಲ್ಲೆಗೆ 5 ಪ್ಯಾರಾ ಮಿಲಿಟರಿ ಫೋರ್ಸ್ ಬರಲಿದ್ದು. ಜಿಲ್ಲಾ ವ್ಯಾಪ್ತಿಯಲ್ಲಿ 1942 ಮತಗಟ್ಟೆ ಸ್ಥಾಪನೆಯಾಗಿದೆ. ಈ ಪೈಕಿ 385 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು. ಕೇರಳ ಹೋಗುವ ಹೆದ್ದಾರಿಯಲ್ಲಿನ ಬಾವಲಿ ಚೆಕ್ ಪೋಸ್ಟ್ನಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದರೊಟ್ಟಿಗೆ ಸರ್ಪ್ರೈಸ್ ಚೆಕ್ ಪೋಸ್ಟ್ ಕೂಡ ಇರಲಿವೆ. ಅವು ಸಹ ಆಗಾಗ್ಗೆ ಚೇಂಜ್ ಆಗುತ್ತಿರುತ್ತವೆ ಎಂದು ಮಾಧ್ಯಮಗೋಷ್ಟಿ ಮೈಸೂರು ಜಿಲ್ಲಾ ಎಸ್‌ಪಿ ಸೀಮಾ ಲಾಟ್ಕರ್ ಹೇಳಿದರು.
ಇದನ್ನೂ ಓದಿ : ಸಾಂಪ್ರದಾಯಿಕ ಉಡುಗೆ ತೊಟ್ಟು ಬೀದಿಗಿಳಿದ ಅಧಿಕಾರಿ ಸಿಬ್ಬಂದಿ ವರ್ಗ : ಮತದಾನ ಜಾಗೃತಿಗೆ ವಿನೂತನ ಪ್ರಯತ್ನ