ಮೈಸೂರು : ಮೈಸೂರಿನಲ್ಲಿಯೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಘೋಷಣೆ ಮಾಡಿದ್ರೆ ಏನು ಕಥೆಯೆಂದು ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದರು.
ನಗರದ ವಾಣಿಜ್ಯ ವಹಿವಾಟು ರಸ್ತೆಗಳಾದ ಸಂತೆಪೇಟೆ, ಶಿವರಾಮ್ ಪೇಟೆ, ದೇವರಾಜ ಅರಸು ರಸ್ತೆ, ದೇವರಾಜ ಮಾರ್ಕೇಟ್ನಲ್ಲಿ ಜನ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಪರಿಣಾಮ, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಸವಾರರು ಪರದಾಡಿದ್ರೆ, ಸಾರ್ವಜನಿಕರು ವಸ್ತುಗಳ ಖರೀದಿಯಲ್ಲಿ ಮಗ್ನರಾಗಿದ್ದರು.
ನಾಳೆಯಿಂದ ಲಾಕ್ಡೌನ್ ಆಗುತ್ತೆ ಅನ್ನೋ ಆತಂಕದಲ್ಲಿದ್ದ ಜನ ಒಂದು ವಾರಕ್ಕೆ ಬೇಕಾಗುವ ಅಗತ್ಯ ವಸ್ತುಗಳ ದಾಸ್ತಾನಿಗಾಗಿ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ. ಇಂದು ಬೆಳಗ್ಗೆಯಿಂದಲೂ ಬಿರುಸಿನಿಂದ ವ್ಯಾಪಾರ, ವಹಿವಾಟು ನಡೆಯುತ್ತಿದೆ. ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ, ಹೆಗಲಮೇಲೆ ಮೂಟೆಗಟ್ಟಲೆ ಸಾಮಗ್ರಿಗಳನ್ನು ಸಾರ್ವಜನಿಕರು ಕೊಂಡೊಯ್ದರು. ಲಾಕ್ಡೌನ್ ಕುರಿತು ಇಂದು ಸಿಎಂ ಜೊತೆ ಜಿಲ್ಲಾಧಿಕಾರಿ ಸಭೆ ನಡೆಸಿದ್ದು, ಸಂಜೆಯೊಳಗೆ ಲಾಕ್ಡೌನ್ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.