ಮೈಸೂರು: ಪರ್ವ ನಾಟಕ ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದು ಕೃತಿಯ ಕರ್ತೃ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಕಲಾಮಂದಿರದಲ್ಲಿ 'ಪರ್ವ' ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಟಕದಲ್ಲಿ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಪರ್ವವನ್ನು ಪ್ರಕಾಶ್ ಬೆಳವಾಡಿ ಉತ್ತಮವಾಗಿ ನಿರ್ದೇಶಿಸಿದ್ದಾರೆ. ನಾಟಕದ ಮೂಲಕ ಪರ್ವ ಕಾದಂಬರಿಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಪರ್ವ ನಾಟಕದ ರೂಪದಲ್ಲಿ ಬಂದಿರುವುದು ಖುಷಿ ತಂದಿದೆ ಎಂದರು.
ಕಾದಂಬರಿಯ ಕಲ್ಪನೆಗಳು, ಘಟನೆಗಳು ಚಿತ್ರಣವಾಗಿ ಬಂದಿವೆ. ಈಗಾಗಲೇ ರಿಹರ್ಸಲ್ನಲ್ಲಿ ನಾನು ಪರ್ವ ನಾಟಕ ನೋಡಿದ್ದೇನೆ. ಪರ್ವ ಕಾದಂಬರಿ ಅದ್ಭುತವಾಗಿ ನಾಟಕದ ರೂಪ ಪಡೆದಿದೆ ಎಂದು ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪರ್ವ ನಾಟಕ ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾತನಾಡಿ, ನಾಟಕಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳಿದರು.
ಓದಿ : ಮೈಸೂರು: ಸುಡು ಬಿಸಿಲಿನಲ್ಲೂ ನೋಡುಗರ ಕಣ್ಮನ ಸೆಳೆಯುತ್ತಿದೆ ಟ್ಯುಬಿಟಿಯಾ ಹೂವು
ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಎಸ್.ಎಲ್.ಭೈರಪ್ಪನವರು ಪರ್ವ ಕಾದಂಬರಿಗೆ ಫುಲ್ ಮಾಕ್ಸ್ ನೀಡಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆಯೇ ಕಾದಂಬರಿಯನ್ನು ನಾಟಕ ಮಾಡುವ ಪ್ರಯತ್ನ ಆಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಇದೀಗ ಕಾದಂಬರಿ ನಾಟಕವಾಗಿ ಬಂದಿದೆ. ಇದು ಮೈಸೂರಿನಲ್ಲಿ ಜರುಗುತ್ತಿರುವುದು ಪರ್ವ ಹಬ್ಬ. ಮೊದಲ ಪರ್ವಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿ, ಮೊದಲ ಭಾಗ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪರ್ವ ನೋಡುತ್ತಿದ್ದರೆ ಮತ್ತಷ್ಟು ಕುತೂಹಲ ಹೆಚ್ಚಾಗುತ್ತಿದೆ. ಇನ್ನುಳಿದ ಭಾಗವು ಅದ್ಭುತವಾಗಿರಲಿದೆ ಅನ್ನಿಸುತ್ತಿದೆ. ಕಾದಂಬರಿಯನ್ನು ರಂಗ ರೂಪಕ್ಕೆ ತರುವುದು ಸುಲಭದ ಕೆಲಸವಲ್ಲ. ಇಲ್ಲಿ ಮಹಾ ಕಾದಂಬರಿಯನ್ನು ನಾಟಕ ಮಾಡಲಾಗಿದೆ. ಅದ್ಭುತವಾದ ಪ್ರಯತ್ನ ಇದಾಗಿದೆ ಎಂದರು.