ಮೈಸೂರು: ಕೆಲ ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗಗಳನ್ನು ಸಾವಿಗೂ ಮುನ್ನ ದಾನ ಮಾಡುವ ಮೂಲಕ ಪೋಷಕರು ಪುತ್ರನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಂಡ್ಯದ ಮಳವಳ್ಳಿಯ ವಿದ್ಯಾರ್ಥಿ ಶರತ್ (18) ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಶರತ್ ಅಂಗಾಂಗ ದಾನ ಮಾಡಲು ಪೋಷಕರು ನಿರ್ಧರಿಸಿದ್ದರು.
ಮಳವಳ್ಳಿ ಸರ್ಕಾರಿ ಆಸ್ಪತ್ರೆ ವ್ಯೆದ್ಯರ ಸೂಚನೆ ಮೇರೆಗೆ ಶರತ್ನನ್ನು ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಆರೋಗ್ಯ ಸ್ಥಿತಿ ಗಂಭೀರಗೊಂಡ ಕಾರಣ ಡಿ. 24ರ ರಾತ್ರಿ ಅಪೋಲೋ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಎರಡು ದಿನಗಳ ಚಿಕಿತ್ಸೆ ಬಳಿಕ ಭಾನುವಾರ ಮಧ್ಯಾಹ್ನ ಮೆದುಳು ನಿಷ್ಕ್ರಿಯಗೊಂಡಿರುವುದು ಧೃಢವಾಯಿತು. ಹೀಗಾಗಿ ಅಂಗಾಂಗ ದಾನದ ಕುರಿತು ಪೋಷಕರಿಗೆ ವೈದ್ಯರು ಮಾಹಿತಿ ನೀಡಿದ್ದು, ಇದಕ್ಕೆ ಪೋಷಕರು ಒಪ್ಪಿದ್ದರು.
ಅಂಗಾಂಗ ದಾನ ಶಿಷ್ಟಾಚಾರ ಪಾಲನೆ ಮೂಲಕ ಶರತ್ ಅಂಗಾಂಗ (ಹೃದಯ, 2 ಕಿಡ್ನಿಗಳು, ಯಕೃತ್, ಮೇದೋಜೀರಕ ಗ್ರಂಥಿ, ಕಾರ್ನಿಯಾ) ಗಳನ್ನು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಪಡೆದು, ಅಗತ್ಯವಿದ್ದವರಿಗೆ ಭಾನುವಾರವೇ ಮೇದೋಜೀರಕ ಗ್ರಂಥಿ, ಮತ್ತು ಕಿಡ್ನಿ ಕಸಿ, (ಎಸ್.ಕೆ.ಪಿ.ಡಿ.) ಹಾಗೂ ಯಕೃತ್ ಕಸಿ ಮಾಡಲಾಗಿದೆ.
ಇದನ್ನೂ ಓದಿ: ಧಾರವಾಡ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: 6 ಅಪ್ರಾಪ್ತರು ವಶಕ್ಕೆ