ಮೈಸೂರು: ವಿಶ್ವ ವಿಖ್ಯಾತ ಅಂಬಾವಿಲಾಸ ಅರಮನೆಯ ರಕ್ಷಣಾ ಗೋಡೆ ಏಕಾಏಕಿ ಕುಸಿದಿದೆ. ಇದು ಪಾರಂಪರಿಕ ಕಟ್ಟಡಗಳಲ್ಲಿ ಒಂದಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಾಗೂ ಸರಿಯಾದ ನಿರ್ವಹಣೆ ಇಲ್ಲದೆ ಐತಿಹಾಸಿಕ ಹಿನ್ನೆಲೆಯುಳ್ಳ ವಿಶ್ವ ಪ್ರಸಿದ್ಧ ಅಂಬಾವಿಲಾಸ ಅರಮನೆಯ ಕೋಟೆ, ಮಾರಮ್ಮ ದೇವಾಲಯ ಹಾಗೂ ಜಯ ಮಾರ್ತಾಂಡ ದ್ವಾರದ ನಡುವೆ ಇರುವ ಕೋಟೆಯ ಗೋಡೆ ಕುಸಿದಿದೆ.
ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ಅರಮನೆಗೆ ಮೈಸೂರು ಅರಸರು ಈ ಕೋಟೆಯನ್ನು ನಿರ್ಮಿಸಿದ್ದರು. ಈಗ ಸರಿಯಾದ ನಿರ್ವಹಣೆ ಇಲ್ಲದೆ ಕುಸಿದಿದೆ ಎಂಬುದು ಇಲ್ಲಿನ ಪಾರಂಪರಿಕ ತಜ್ಞರ ಅಭಿಪ್ರಾಯ. ಘಟನಾ ಸ್ಥಳಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪಾರಂಪರಿಕ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅರಮನೆಯ ಕೋಟೆ ಸರಿಯಾದ ನಿರ್ವಹಣೆ ಇಲ್ಲದೇ ಹಲವು ಕಡೆ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. ಇದೇ ರೀತಿ ಮಳೆ ಮುಂದುವರೆದರೆ ಹಲವು ಕಡೆ ಕುಸಿಯುವ ಭೀತಿ ಇದೆ. ಸದ್ಯ ಪಾರಂಪರಿಕ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿ ದುರಸ್ತಿಗೆ ಮುಂದಾಗಿದ್ದಾರೆ.
ಈಗಾಗಲೇ ಮೈಸೂರು ನಗರದಲ್ಲಿ ಲ್ಯಾನ್ ಸ್ಟೋನ್ ಕಟ್ಟಡ, ಪಾರಂಪರಿಕ ದೇವರಾಜ ಮಾರುಕಟ್ಟೆ, ಪಾರಂಪರಿಕ ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಕಡೆ ಪಾರಂಪರಿಕ ಕಟ್ಟಡಗಳು ಉರುಳಿ ಬಿದ್ದಿವೆ. ಅವುಗಳ ದುರಸ್ತಿ ಇನ್ನೂ ಆಗಿಲ್ಲ. ಅದರ ಸಾಲಿಗೆ ಈಗ ಅಂಬಾವಿಲಾಸ ಅರಮನೆಯ ಮುಂಭಾಗದ ರಕ್ಷಣಾ ಕೋಟೆಯ ಗೋಡೆ ಕುಸಿದಿದ್ದು ಮತ್ತೊಂದು ಸೇರ್ಪಡೆಗೊಂಡಿದೆ.
ಇದನ್ನೂ ಓದಿ: ಮೈಸೂರು ಅರಮನೆ ಹಳೆಯದಾಯ್ತು ಎಂದು ಕೆಡವಿ ಮತ್ತೆ ಕಟ್ಟಲು ಆಗುತ್ತಾ?: ಯದುವೀರ್ ಪ್ರಶ್ನೆ