ಮೈಸೂರು:ಪರಿಹಾರ ಕೇಳಲು ಪ್ರಧಾನಿ ಹತ್ತಿರ ಅಲ್ಲ, ಪ್ರಧಾನಿ ಮನೆ ಮುಂದೆ ಹೋಗಲೂ ರಾಜ್ಯದ ಸಂಸದರು ಹೆದರುತ್ತಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಹರಿಹಾಯ್ದರು.
ಮೈಸೂರು ರೈಲ್ವೆ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆಯಿಂದ ಕತ್ತರಿಸಿರುವ ರಾಜ್ಯಕ್ಕೆ 38ಸಾವಿರ ಕೋಟಿ ರೂಪಾಯಿ ಬೇಕು. ಆದರೆ, ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದು 1200 ಕೋಟಿ ರೂಪಾಯಿ ನೀಡಿದೆ. ಇದು ಸಾಲುವುದಿಲ್ಲ. ನಮ್ಮ ಸಂಸದರು ರಾಜ್ಯಕ್ಕೆ ಹೆಚ್ಚಿನ ಹಣ ತರುವುದರಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿಕಾರಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಡಳಿತ ನಡೆಸಲು ಧೈರ್ಯ ಕಳೆದುಕೊಂಡಿದ್ದಾರೆ. ಹೀಗಾದರೆ ರಾಜ್ಯ ಪರಿಸ್ಥಿತಿ ನಿಭಾಯಿಸುವವರು ಯಾರು ಎಂದು ಪ್ರಶ್ನಿಸಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಬೇಕು. ರಾಹುಲ್ ಗಾಂಧಿ ಅವರು ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ಖಂಡಿಸಿ ಅಕ್ಟೋಬರ್ 15 ರಂದು ಗಡಿಭಾಗ ಹಾಗೂ ಅ.19 ರಂದು ಚಾಮರಾಜನಗರ ಬಂದ್ ಮಾಡಲಾಗುವುದು ಎಂದರು.