ಮೈಸೂರು : ಕಾವೇರಿ ಹೋರಾಟಕ್ಕೆ ನಮ್ಮ ಕುಟುಂಬದ ಬೆಂಬಲ ಯಾವಾಗಲು ಇದೆ. ಹಿಂದಿನಿಂದಲೂ ನಮ್ಮ ಕುಟುಂಬ, ರಾಜ್ಯದ ಜನರ ಜೊತೆಯಲ್ಲೇ ಇದ್ದೇವೆ. ಮುಂದೆಯೂ ಇರುತ್ತೇವೆ ಎಂದು ಮೈಸೂರಿನಲ್ಲಿ ಕನ್ನಡದ ನಟ ರಾಘವೇಂದ್ರ ರಾಜ್ಕುಮಾರ್ ಅವರ ಎರಡನೇ ಮಗ, ನಟ ಯುವ ರಾಜ್ಕುಮಾರ್ ಹೇಳಿಕೆ ನೀಡಿದ್ದಾರೆ.
ಹಲವು ದಿನಗಳಿಂದ ಮೈಸೂರಿನ ಸುತ್ತ ಮುತ್ತ "ಯುವರಾಜ" ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಗುರುವಾರ ನಗರದ ಚಾಮುಂಡೇಶ್ವರಿ ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಶುಕ್ರವಾರ ಸಹ ಚಿತ್ರೀಕರಣ ನಡೆಯುತ್ತಿದೆ ಎಂದು ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಸಿನಿಮಾದ ಹೀರೋ ಯುವ ಹಾಗೂ ಚಿತ್ರತಂಡದ ಇತರರು ಇರುವುದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಕಾರ್ಯಕರ್ತರು ಬಂದ್ ದಿನವೂ ಶೂಟಿಂಗ್ ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಕಾವೇರಿ ಕಿಚ್ಚು: ಮಂಡ್ಯದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಆಕ್ರೋಶ
ಬಳಿಕ ಯುವ ರಾಜ್ಕುಮಾರ್ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಮೈಸೂರಿನಲ್ಲಿ ನಿನ್ನೆ ಮತ್ತು ಇವತ್ತು ಶೂಟಿಂಗ್ ಇತ್ತು. ಆದರೆ, ಇವತ್ತು ಎಲ್ಲ ಕಡೆ ಪ್ರತಿಭಟನೆ ನಡೆಯುತ್ತಿದ್ದು, ಅದಕ್ಕಾಗಿ ಶೂಟಿಂಗ್ ಮಾಡುತ್ತಿಲ್ಲ. ನಿನ್ನೆಯ ಶೂಟಿಂಗ್ ಸಮಯದಲ್ಲಿ ಲೈಟ್ ಕೆಟ್ಟು ಹೋಗಿದ್ದು, ಹಾಗಾಗಿ ಆ ಲೈಟ್ ಪರೀಕ್ಷೆ ಮಾಡಲು ಬಂದಿದ್ದೇವೆ. ಜೊತೆಗೆ ಯೂನಿಟ್ನ ಎಲ್ಲ ಹುಡುಗರು ಇಲ್ಲೇ ಇರುವುದರಿಂದ ನೋಡಿಕೊಂಡು ಹೋಗಲು ಬಂದಿದ್ದೇವೆ ಅಷ್ಟೇ. ಇಂದು ಯಾವುದೇ ಶೂಟಿಂಗ್ ನಡೆದಿಲ್ಲ. ನಾಳೆಯಿಂದ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಾವೇರಿಗಾಗಿ ಸ್ಯಾಂಡಲ್ವುಡ್ ತಾರೆಯರು ಸಾಥ್ : ಮತ್ತೊಂದೆಡೆ ರಾಜ್ಯ ರಾಜಧಾನಿಯಲ್ಲಿ ಕಾವೇರಿಗಾಗಿ ಬೀದಿಗಿಳಿಯಲಿರುವ ಸ್ಯಾಂಡಲ್ವುಡ್ ತಾರೆಯರು, ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಗುರುರಾಜ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಇದೇ ವೇಳೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್ ಎಂ ಸುರೇಶ್, ನಾವು ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ಮಾಡುತ್ತಿಲ್ಲ. ಬದಲಿಗೆ ಚಿತ್ರೋದ್ಯಮದಿಂದ ರೈತರ ಹೋರಾಟಕ್ಕೆ ನಾವು ಬೆಂಬಲ ಸೂಚಿಸುತ್ತಿದ್ದೇವೆ ಎಂದು ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ನಟರಾದ ಶಿವರಾಜ್ ಕುಮಾರ್, ಉಪೇಂದ್ರ, ಶ್ರೀಮುರಳಿ, ದರ್ಶನ್, ಲೂಸ್ ಮಾದ ಯೋಗಿ, ಚಿಕ್ಕಣ್ಣ, ಶ್ರೀನಾಥ್, ಓಂ ಸಾಯಿ ಪ್ರಕಾಶ್, ರಘು ಮುಖರ್ಜಿ, ತಬಲ ನಾಣಿ, ಶ್ರೀಮುರಳಿ ವಿಜಯರಾಘವೇಂದ್ರ, ಶ್ರೀನಿವಾಸ್ ಮೂರ್ತಿ, ನಟಿಯರಾದ ಉಮಾಶ್ರೀ, ಪೂಜಾಗಾಂಧಿ, ಅನು ಪ್ರಭಾಕರ್, ರೂಪಿಕಾ, ಶೃತಿ, ಫಿಲ್ಮ್ ಚೇಂಬರ್ ಸದಸ್ಯರು ಸೇರಿದಂತೆ ನೂರಾರು ಕಿರುತೆರೆ ಕಲಾವಿದರು ಭಾಗವಹಿಸಿದ್ದರು.
ಇದನ್ನೂ ಓದಿ : 'ಕಾವೇರಿ'ದ ಬಂದ್: ಸ್ಯಾಂಡಲ್ವುಡ್ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಉಪೇಂದ್ರ, ದರ್ಶನ್, ಶ್ರೀನಾಥ್ ಸೇರಿ ಹಲವರು ಭಾಗಿ