ಮೈಸೂರು: ದಿನೇ ದಿನೆ ಕೊರೊನಾ ಹಾಗೂ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಸರ್ಕಾರದ ಅಧೀನದಲ್ಲಿರುವ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯವನ್ನು ಕೋವಿಡ್ ಸೆಂಟರ್ ಆಗಿ ಪರಿವರ್ತಿಸಲು ಮುಂದಾಗಿದೆ.
ಆದರೆ, ನಂಜನಗೂಡು ತಾಲೂಕಿನ ಸಿಂಧುವಳ್ಳಿ(ಕಡುಬಿನಕಟ್ಟೆ) ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯನ್ನು ಕೋವಿಡ್ ಸೆಂಟರ್ ಮಾಡಲು ತಾಲೂಕು ಆಡಳಿತ ಮುಂದಾಗಿರುವ ವಿಷಯ ತಿಳಿದ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದ ಶಾಲೆಗಳು ತಡವಾಗಿ ಆರಂಭವಾಗಿದೆ. ಅಲ್ಲದೇ, ಪಠ್ಯಗಳು ಇನ್ನೂ ಮುಗಿದಿಲ್ಲ. ಪರೀಕ್ಷೆಗೆ ಮೂರು ತಿಂಗಳಷ್ಟೆ ಬಾಕಿ ಇದೆ. ಹೀಗಿರುವಾಗ, ಶಾಲೆಯನ್ನು ಕೋವಿಡ್ ಸೆಂಟರ್ ಮಾಡಿದರೆ, ವಿದ್ಯಾರ್ಥಿಗಳು ಮನೆಗೆ ಹೋಗಬೇಕಾಗುತ್ತದೆ. ಮೊಬೈಲ್‌ನಲ್ಲಿ ಪಾಠ ಕೇಳುವುದು ಕಷ್ಟವಾಗಲಿದೆ. ಎಲ್ಲ ವಿದ್ಯಾರ್ಥಿಗಳಿಗೂ ಮೊಬೈಲ್ ಇಲ್ಲ. ಮೊಬೈಲ್ ಇದ್ದರೂ ನೆಟ್‌ವರ್ಕ್ ಸಮಸ್ಯೆ ಎದುರಾಗಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಆದ್ದರಿಂದ ವಸತಿ ಶಾಲೆಯನ್ನು ಕೋವಿಡ್ ಸೆಂಟರ್ ಮಾಡಬಾರದು ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಮನವಿ ಮಾಡಿದ್ದಾರೆ.