ಮೈಸೂರು: ಕೊರೊನಾ ವೈರಸ್ ಎರಡನೇ ಹಂತದಲ್ಲಿದೆ. ಮೂರನೇ ಹಂತಕ್ಕೆ ತಲುಪುವ ಮುನ್ನ ರಾಜ್ಯ ಸರ್ಕಾರ ಇನ್ನು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಲು ಅಗತ್ಯ ಸಲಕರಣೆಗಳನ್ನು ಸಿದ್ಧ ಮಾಡಿಕೊಳ್ಳಬೇಕಿದೆ. ಚೀನಾದಿಂದ ಬಂದಿದ್ದ ಕಂಟೈನರ್ ನಂಜನಗೂಡಿನ ಜುಬಿಲಿಯಂಟ್ ಕಾರ್ಖಾನೆಗೆ ಬಂದಾಗ ಅಲ್ಲಿನ ಸಿಬ್ಬಂದಿ ಮುಟ್ಟಿದ್ದಾರೆ ಎಂಬ ಮಾತಿದೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ. ನಂಜನಗೂಡಿನ ಜುಬಿಲಿಯಂಟ್ ನೌಕರರು ಕೂಡ ಆರೋಗ್ಯ ತಪಾಸಣೆಗೆ ಸಹಕಾರ ಕೊಡಲು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ಹಾಪ್ ಕಾಮ್ಸ್, ಪೊಲೀಸ್, ಆರೋಗ್ಯ ಇಲಾಖೆ, ನಿರಾಶ್ರಿತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ತರಕಾರಿ ಮಾರಾಟಕ್ಕೆ ಮಾರುಕಟ್ಟೆ ಒದಗಿಸಬೇಕು. ಈ ತಿಂಗಳು ಮಳೆ ಬಂದರೆ ಬಿತ್ತನೆ ಶುರುವಾಗಲಿದೆ. ಬೀಜ, ರಸಗೊಬ್ಬರ ಕೊಡುವುದನ್ನ ನಿಲ್ಲಿಸಬಾರದು. ತರಕಾರಿ ಕೊಂಡುಕೊಳ್ಳಲು ಅವಕಾಶ ಮಾಡಿಕೊಡಬೇಕು. ದಿನಸಿ, ಆಹಾರ ಪದಾರ್ಥಗಳ ಸರಬರಾಜು ನಿಲ್ಲಿಸಬಾರದು ಹಾಗೂ ಅಡ್ಡಿಪಡ್ಡಿಸಬಾರದು ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಏ.5 ರ ರಾತ್ರಿ ದೀಪ ಹಚ್ಚಲು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ದೀಪ ಹಚ್ಚುವುದರಿಂದ ರೋಗ ವಾಸಿಯಾಗುವುದಾದರೆ ಹಚ್ಚಲಿ ಬಿಡಿ ಎಂದರು.