ಮೈಸೂರು: ಸ್ಯಾಂಟ್ರೋ ರವಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು. ಇಂದು ತಮ್ಮ ಮೈಸೂರಿನ ಶಾರದಾದೇವಿ ನಗರದ ಮನೆಯ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಆ ಮೂಲಕ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿದೆ. ಏಕೆಂದರೆ ಈ ಪ್ರಕರಣ ಬಯಲಿಗೆ ಬಂದರೆ ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತದೆ ಎಂದು ದೂರಿದರು.
ಸಿಐಡಿ ಸರ್ಕಾರದ ಕೆಳಗಿರುವ ಒಂದು ಸಂಸ್ಥೆ.. ಸಿಐಡಿ ಸ್ವತಂತ್ರ ಸಂಸ್ಥೆಯಲ್ಲ. ಅದು ಕ್ರೈಂಗೆ ಸಂಬಂಧಿಸಿದ ಒಂದು ವಿಭಾಗ. ಇದು ರಾಜ್ಯ ಸರ್ಕಾರದ ಕೆಳಗಿರುವ ಒಂದು ಸಂಸ್ಥೆ. ಇವರು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಸ್ಯಾಂಟ್ರೋ ರವಿ ಪ್ರಕರಣವನ್ನು ಸರ್ಕಾರ ಸಿಐಡಿ ಮೂಲಕ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ.. ಕರ್ನಾಟಕದಲ್ಲಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ನಾವು 130 ರಿಂದ 150 ಸ್ಥಾನ ಗೆಲ್ಲುತ್ತೇವೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನ ತೀರ್ಮಾನ ಮಾಡಿದ್ದಾರೆ. ಯಾರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಕೋಲಾರದಿಂದ ಮಾತ್ರ ಸ್ಪರ್ಧೆ.. ಕೋಲಾರ ವಿಧಾನಸಭಾ ಕ್ಷೇತ್ರದಿಂದ ಮಾತ್ರ ನನ್ನ ಸ್ಪರ್ಧೆ. ನನ್ನನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳು ಪ್ರಯತ್ನ ಮಾಡಿದರು ಅಲ್ಲಿ ನಾನೇ ಗೆಲ್ಲೋದು. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ ಇದೇ ರೀತಿ ನನ್ನನ್ನು ಸೋಲಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ಶ್ರೀರಾಮುಲು ಅವರನ್ನು ನನ್ನ ವಿರುದ್ಧ ನಿಲ್ಲಿಸಿದ್ದರು. ಅಲ್ಲಿ ಏನಾಯಿತು?. ಅದೇ ರೀತಿ ಈ ಬಾರಿ ಕೋಲಾರದಲ್ಲೂ ನನ್ನನ್ನು ಸೋಲಿಸಲು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಹಾಗೂ ಜೆಡಿಎಸ್ ಒಳಸಂಚು ಮಾಡುತ್ತಿವೆ. ಆದರೆ ಅವರೇನೇ ಮಾಡಿದರೂ ನಾನೇ ಕೋಲಾರದಲ್ಲಿ ಗೆಲ್ಲುತ್ತೇನೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ.. ನಾನು ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೇನೆ. ಬಿಜೆಪಿಯಿಂದ ನಡ್ಡಾ ಅವರು, ಪ್ರಧಾನಿಯವರು ಹಾಗೂ ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂಬುದು ಜನರಿಗೆ ಗೊತ್ತು. ನೂರಕ್ಕೆ ನೂರು ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧಿಕಾರಕ್ಕೆ ಬಂದ ನಂತರ, ನಾವು ಹೇಳಿದಂತೆ 200 ಯೂನಿಟ್ ವಿದ್ಯುತ್ ಹಾಗೂ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ., ಕೊಡುತ್ತೇವೆ ಎಂದು ಹೇಳಿದ್ದೇವೆ. ಎಷ್ಟು ಖರ್ಚಾದರು ಕೊಟ್ಟ ಭರವಸೆಯನ್ನು ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಸಿದ್ದರಾಮಯ್ಯ ಮನೆಗೆ ಸ್ಥಳೀಯ ನಾಯಕರ ಭೇಟಿ.. ನಿನ್ನೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಸ್ಥಳೀಯ ನಾಯಕರ ಸೇರ್ಪಡೆ ಕಾರ್ಯಕ್ರಮದಲ್ಲಿ, ಸೇರ್ಪಡೆಯಾದ ಸ್ಥಳೀಯ ನಾಯಕರು ಇಂದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನಂತರ ಜನವರಿ 26ರಂದು ಮೈಸೂರು ನಗರದಲ್ಲಿ ನಡೆಯಲಿರುವ ಕಾಂಗ್ರೆಸ್ ಜಿಲ್ಲಾ ಮಟ್ಟದ ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲು ಮಾತುಕತೆ ನಡೆಸಿದ ಸಿದ್ದರಾಮಯ್ಯ ನಂತರ ಹಾಸನದ ಕಾರ್ಯಕ್ರಮಕ್ಕೆ ಹೊರಟರು.
ಜಮೀರ್-ಸಿದ್ದರಾಮಯ್ಯ ಗೌಪ್ಯ ಮಾತುಕತೆ.. ಶುಕ್ರವಾರ ರಾತ್ರಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಮೀರ್ ಅಹಮ್ಮದ್ ಗೌಪ್ಯ ಮಾತುಕತೆ ನಡೆಸಿದ್ದಾರೆ. ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 500 ಕೋಟಿ ಆಫರ್ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ವೇಳೆ ಪ್ರತಿಕ್ರಿಯೆ ಪಡೆಯಲು ಬಂದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಸಿದ್ದರಾಮಯ್ಯ ಗರಂ ಆದರು.
ಇದನ್ನೂ ಓದಿ: ಸಿಐಡಿ ತನಿಖಾಧಿಕಾರಿಗಳ ಮುಂದೆ ಹಾಜರಾದ ಸ್ಯಾಂಟ್ರೋ ರವಿ 2ನೇ ಪತ್ನಿ