ಮೈಸೂರು : ಮಲೇಶಿಯಾ ಹಾಗೂ ಸಿಂಗಾಪೂರ ಮೃಗಾಲಯಗಳಿಂದ ತರಲಾಗಿರುವ ಒರಾಂಗೂಟಾನ್‌ಗಳನ್ನು ಪ್ರವಾಸಿಗರ ವೀಕ್ಷಣೆಗೆ ಇಂದಿನಿಂದ ಅವಕಾಶ ಮಾಡಿಕೊಡಲಾಗಿದೆ. ನಗರದ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಒರಾಂಗೂಟಾನ್ ಪ್ರಾಣಿ ವೀಕ್ಷಣೆಗೆ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ(BNPM) ಅಧ್ಯಕ್ಷೆ ತೃಪ್ತಿ ಪಾತ್ರ ಘೋಷ್ ಅವರು ಹಸಿರು ನಿಶಾನೆ ತೋರಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಳವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆಗೆ ನಮ್ಮ ಸಂಸ್ಥೆಯ ನೆರವು ನೀಡಿದೆ. ಸಾರ್ವಜನಿಕರು ಹಾಗೂ ಮಕ್ಕಳು ಇಂತಹ ಅಪರೂಪದ ಪ್ರಾಣಿಗಳನ್ನು ನೋಡಬೇಕು ಎಂದರು.
ಅಪರ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಬಿ ಪಿ ರವಿ ಮಾತನಾಡಿ, ಮಲೇಶಿಯಾ ಹಾಗೂ ಸಿಂಗಾಪುರದಿಂದ ಒರಾಂಗೂಟಾನ್ ತರಿಸಲಾಗಿದೆ. ಮನುಷ್ಯನಿಗೆ ಈ ಪ್ರಾಣಿ ಹತ್ತಿರವಾಗಲಿದೆ. ಅಲ್ಲದೆ ಅತ್ಯಂತ ಬುದ್ಧಿಶಾಲಿ. ಸಸ್ಯಹಾರಿ ಪ್ರಾಣಿಯಾಗಿರುವ ಒರಾಂಗೂಟಾನ್, ಮೈಸೂರು ಮೃಗಾಲಯದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದು ಹೇಳಿದರು.
ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಗೊರಿಲ್ಲಾ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು. ಮೃಗಾಲಯದಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವುದಿಲ್ಲ ಎಂದು ತಿಳಿಸಿದರು.